ತುಮಕೂರು: ಕಳೆದ ಅಕ್ಟೋಬರ್ 9ರಂದು ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ಇಡಗೂರು ಗ್ರಾಮದ ಶಾಲಾ ಆವರಣದಲ್ಲಿಯೇ ಜಿಲೆಟಿನ್ ಸ್ಫೋಟದಿಂದ ಕೈ ಬೆರಳುಗಳು ಕಳೆದುಕೊಂಡಿರುವ 10ನೇ ತರಗತಿ ವಿದ್ಯಾರ್ಥಿ ಮೋನಿಶ್ಗೌಡಗೆ ಫಿಜಿಯೋಥೆರಪಿ ಮೂಲಕ ಬರವಣಿಗೆ ತರಬೇತಿ ನೀಡಲು ಜಿಲ್ಲಾಡಳಿತ ಜವಾಬ್ಧಾರಿ ತೆಗೆದುಕೊಂಡಿದೆ.
ಪ್ರಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದ ಜಿಲ್ಲಾಧಿಕಾರಿ ಶುಭಕಲ್ಯಾಣ್ ನಂತರ ಯಾರೊಬ್ಬ ಅಧಿಕಾರಿಯೂ ಆ ಕಡೆ ತಿರುಗಿಯೂ ನೋಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ತಾಯಿ ನಳಿನಾ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಆಗಮಿಸಿ ಗಂಟೆಗೂ ಹೆಚ್ಚು ಕಾಲ ಕಾದು ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಿದರು.
ಸಾಕಷ್ಟು ಸಮಯ ಕಾದರೂ ಜಿಲ್ಲಾಧಿಕಾರಿ ಭೇಟಿಗೆ ಅವಕಾಶವಾಗದ ನಳಿನಾ ಪಟ್ಟುಬಿಡದೆ ಕಚೇರಿ ಮುಂಭಾಗವೇ ಕಾದು ಭೇಟಿಯಾಗಿ ಹೇಳಿದ ಸಮಸ್ಯೆ ಆಲಿಸಿದ ಶುಭಕಲ್ಯಾಣ್, ಗಾಯಗೊಂಡಿರುವ ವಿದ್ಯಾರ್ಥಿಗೆ ಬರವಣಿಗೆ ತರಬೇತಿ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿದರು.
ಜಿಲೆಟಿನ್ ಸ್ಫೋಟದಿಂದ ಮೋನಿಶ್ಗೌಡ ಬಲಗೈನ ಮೂರು ಬೆರಳುಗಳು ತುಂಡಾಗಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಕೈಬೆರಳುಗಳು ಪೂರ್ಣ ಗುಣಮುಖವಾದ ನಂತರ ಫಿಜಿಯೋಥೆರಪಿ ಮೂಲಕ ಬರವಣಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ಗೆ ದೂರವಾಣಿ ಮೂಲಕ ತಾಕೀತು ಮಾಡಿದರು.
ವಿದ್ಯಾರ್ಥಿಯ ತಾಯಿ ನಳಿನಾ ಮಗನ ಚಿಕಿತ್ಸಾ ವೆಚ್ಚವನ್ನು ಭರಿಸಲು ಕ್ರಮ ಕೈಗೊಂಡ ಜಿಲ್ಲಾಧಿಕಾರಿಗೆ ಕೃತಜ್ಞತೆ ಅರ್ಪಿಸಿದರು.