ತುಮಕೂರು: ಹಾಸ್ಟೆಲ್‌ನಲ್ಲಿ ದೀಪಾವಳಿ ಆಚರಣೆಯ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಆರೋಪದ ಮೇಲೆ ಮಧುಗಿರಿಯ ಅಂದ್ರಾಳ್ ನಾಗಭೂಷಣ ಎಂಬುವವರ ವಿರುದ್ಧ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಕ ಬಿ.ಎಂ.ದಿನೇಶ್ ಡಿ.8ರಂದು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ನಿಲಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಸಾಕಷ್ಟು ಅಧಿಕಾರಿಗಳು ಭಾಗವಹಿಸಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಊಟ ಮಾಡಿ ವಾಪಸಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಆತ್ಮಗೌರವಕ್ಕೆ ದಕ್ಕೆಯಾಗುವಂತೆ ವೀಡಿಯೋ ಹೇಳಿಕೆ ನೀಡಿ ಪೋಸ್ಟ್ ಮಾಡಿದ್ದಾರೆ ಎಂದು ಠಾಣೆಯಲ್ಲಿ ದೂರು ನೀಡಿದ್ದಾರೆ.
ಹಾಸ್ಟೆಲ್‌ನಲ್ಲಿ ಆಯೋಜಿಸಿದ್ದ ದೀಪಾವಳಿ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ರೀತಿಯಲ್ಲಿಯೂ ಅಸಭ್ಯ ರೀತಿಯ ಅನುಭವ ಆಗಿಲಲ ಎಂದು ವಿದ್ಯಾರ್ಥಿನಿಯರೇ ಹೇಳಿಕೆ ನೀಡಿದ್ದರೂ ಅಂದ್ರಾಳ್ ನಾಗಭೂಷಣ ಉದ್ದೇಶಪೂರ್ವಕವಾಗಿ ಹೆಣ್ಣು ಮಕ್ಕಳಿಗೆ ಅಗೌರವ ತೋರುವ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಕಾನೂನು ಕ್ರಮಕೈಗೊಳ್ಳಬೇಕು ಎಂದು ಕೋರಿದ್ದಾರೆ.