ತುಮಕೂರು: ಜಿಲ್ಲೆಯಲ್ಲೆಡೆ ಬೀಕರ ಬರ ರಿಯಲ್ ಎಫೆಕ್ಟ್ ತಟ್ಟಲಾರಂಭಿಸಿದೆ, ಸಾಕಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತಾತ್ವರ ಏರ್ಪಟ್ಟಿದ್ದು ಹನಿ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿಧಾನವಾಗಿ ನಿರ್ಮಾಣವಾಗುತ್ತಿದೆ.
ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿ ನರಿಗೇಹಳ್ಳಿಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಸಾಕಷ್ಟು ದಿನಗಳಿಂದಲೂ ಸಮಸ್ಯೆಯಿದ್ದರೂ ಗಮನ ನೀಡದ ಅಧಿಕಾರಿಗಳ ವಿರುದ್ಧ ಮಹಿಳೆಯರು ಕೊಡವಿಡಿದು ಪ್ರತಿಭಟನೆ ಕೂಡ ನಡೆಸಿದ್ದಾರೆ.
ಶೆಟ್ಟಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ನರಿಗೇಹಳ್ಳಿಯಲ್ಲಿ 50 ವಾಸದ ಮನೆಗಳಿದ್ದು 250ಕ್ಕೂ ಹೆಚ್ಚು ಜನರಿದ್ದಾರೆ. ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿAದಲೂ ಕುಡಿಯುವ ನೀರಿಗೆ ತತ್ವಾರ ಎದುರಾಗಿದ್ದು ಗ್ರಾಮಸ್ಥರು ಮತ್ತು ಜಾನುವಾರಗಳು ನೀರಿಗಾಗಿ ಪರಿತಪಿಸುವಂತಾಗಿದೆ.
ಗ್ರಾಮದಲ್ಲಿ ಪ್ರತಿ ದಿನವೂ ಮಹಿಳೆಯರು, ಗಂಡಸರು, ಮಕ್ಕಳಾದಿಯಾಗಿ ನೀರು ತರಲು ದೂರದ ತೋಟ ಸಾಲುಗಳ ಕೊಳವೆ ಬಾವಿಗಳಿಗೆ ಅಲೆದಾಟ ನಡೆಸುವಂತಾಗಿದೆ.
ಗ್ರಾಮದ ಮೀನಾಕ್ಷಿ, ಗೌರಮ್ಮ, ಚಿಕ್ಕಮ್ಮ, ಶಿರಿವಂತಮ್ಮ, ಮಂಜುಳ, ಮುನಿಯಮ್ಮ, ರತ್ನಮ್ಮ, ಚಂದ್ರಮ್ಮ, ತಾಯಮ್ಮ, ರಾಮಚಂದ್ರ ಮತ್ತಿತರರು ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.