ತುಮಕೂರು: ರಾಜ್ಯದ ಖಾಸಗಿ ಅನುದಾನಿತ ಶಾಲೆ, ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲಾ ಬೋಧಕ ಹುದ್ದೆಗಳನ್ನು ಖಾಲಿಯಾದ ದಿನದಿಂದಲೇ ತುಂಬುವಂತೆ ಹೈಕೋರ್ಟ್ ಆದೇಶ ನೀಡಿದರೂ ರಾಜ್ಯ ಸರ್ಕಾರ ಕೇವಲ 2020ನೇ ಸಾಲಿನವರೆಗೆ ಮಾತ್ರ ಬೋಧಕ ಹುದ್ದೆ ಭರ್ತಿ ಮಾಡಲು ಆದೇಶ ನೀಡಿರುವುದು ನ್ಯಾಯಾಲಯದ ಆದೇಶದ ಉಲ್ಲಂಟನೆ ಎಂದು ರಾಜ್ಯ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.
ಒಕ್ಕೂಟದ ರಾಜ್ಯಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಗರದ ರವೀಂದ್ರ ಕಲಾಮಂದಿರದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಸಂಬಂಧ ವಿವಿಧ ರ್ನಿಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, 2016ನೇ ಶೈಕ್ಷಣಿಕ ಸಾಲಿನಿಂದ ಶಿಕ್ಷಕರನ್ನು ನೇಮಿಸದಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯದೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿ ಅನೇಕ ಶಾಲೆಗಳು ಮುಚ್ಚಲ್ಪಟ್ಟಿವೆ. ಅಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಪಡಿಸಿದ್ದ ಶಾಲಾ ಕಟ್ಟಡ, ವಾಚನಾಲಯ, ವಿಜ್ಞಾನ ಸಾಮಗ್ರಿಗಳು, ಪೀಠೋಪಕರಣ, ಆಟದ ಮೈದಾನ, ವಿದ್ಯಾರ್ಥಿನಿಲಯಗಳು ನಿರುಪಯೋಗವಾಗಿವೆ. ಇದರಿಂದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಘೋರ ಅನ್ಯಾಯವಾಗಿದೆ. ಆದ್ದರಿಂದ ಸರ್ಕಾರ 2023ನೇ ಸಾಲಿನವರೆಗೆ ಬೋಧಕ ವರ್ಗದ ಖಾಲಿ ಹುದ್ದೆಗಳಿಗೆ ನೇಮಕ ಮಾಡಿ ಉಚ್ಛ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಬಂಡವಾಳ ಶಾಹಿಗಳಿಗೆ ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಅನುಮತಿ ನೀಡಿ ಹಣ ಸುಲಿಗೆ ಮಾಡಲು ಅವಕಾಶ ನೀಡಿದೆ. ಇಂದು ಶಿಕ್ಷಣ ಕ್ಷೇತ್ರ ಸಾರ್ವತ್ರಿಕ ಶಿಕ್ಷಣವಾಗದೆ ಒಂದು ಉದ್ಯಮವಾಗಿದೆ. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಶಿಕ್ಷಣ ಗಗನಕುಸುಮವಾಗಿದೆ. ಇದರಿಂದ ಪ್ರತಿಯೊಬ್ಬರೂ ಆಂಗ್ಲ ಮಾಧ್ಯಮ ವ್ಯಾಮೋಹಕ್ಕೆ ಬಲಿಯಾಗುತ್ತಿರುವುದರಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ 8ನೇ ತರಗತಿಗೆ ದಾಖಲಾತಿ ಪ್ರಮಾಣ ದಿನದಿನಕ್ಕೆ ಕಡಿಮೆಯಾಗುತ್ತಿದೆ. ಆದರೂ ಕನ್ನಡ ಮಾಧ್ಯಮ ಕಲಿಯಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಸಂವಿಧಾನದ ಆಶಯ ಹಾಗೂ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತ ವರ್ಗದ ಶಿಕ್ಷಣ ಸಂಸ್ಥೆಗಳ ಶಾಲೆಗಳಲ್ಲಿ ಕನಿಷ್ಠ 15 ದಾಖಲಾತಿಗೆ ವಿನಾಯಿತಿ ಇರುವಂತೆ ಕನ್ನಡ ಭಾಷಾ ಮಾಧ್ಯಮ ಶಾಲೆಗಳಿಗೂ ಕನಿಷ್ಠ 15-20 ದಾಖಲಾತಿ ವಿನಾಯಿತಿ ನೀಡಿ ಆದೇಶ ನೀಡಿ ಕನ್ನಡ ಶಾಲೆಗಳನ್ನು ಉಳಿಸಬೇಕು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರ ಎರಡು ಜತೆ ಸಮವಸ್ತ್ರ, ಶೂಗಳನ್ನು ನೀಡುವಂತೆ ಖಾಸಗಿ ಅನುದಾನಿತ ಶಾಲೆ ಮಕ್ಕಳಿಗೂ ನೀಡಬೇಕು ಎಂದು ವೈ.ಹೆಚ್.ಹುಚ್ಚಯ್ಯ ಒತ್ತಾಯಿಸಿದರು.
ಶಾಲೆಗಳಲ್ಲಿ ಬೋಧನೆ ಮಾಡಲು ಕಾಯಂ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯದೆ, ದಾಖಲಾತಿ ಕಡಿಮೆಯಾಗುತ್ತಿದೆ. ಸರ್ಕಾರ ಶಿಕ್ಷಕರ ನೇಮಕಾತಿ ಮಾಡುವುದರಿಂದ ವಿದ್ಯಾರ್ಥಿಗಳ ದಾಖಲಾತಿ ಸುಧಾರಿಸಿ ಹೆಚ್ಚಳವಾಗುತ್ತದೆ. ಖಾಸಗಿ ಅನುದಾನಿತ ಶಾಲೆಗಳಲ್ಲಿ ಜವಾನರು ಇಲ್ಲದೆ ಶಾಲಾ ಕೊಠಡಿಗಳ ಸ್ವಚ್ಛತೆ, ಬೆಲ್ ಹೊಡೆಯುವ ಕಾರ್ಯವನ್ನು ವಿದ್ಯಾರ್ಥಿಗಳು ಅಥವಾ ಶಿಕ್ಷಕರು ಮಾಡುತ್ತಾರೆ ಎಂಬ ದೂರುಗಳು ಇವೆ. ಇದನ್ನು ನಿವಾರಿಸಲು ಸರ್ಕಾರ ಅನುದಾನಿತ ಶಾಲೆಗಳಿಗೆ ಜವಾನ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಎಂ.ಬಸವಯ್ಯ, ಪ್ರಧಾನ ಕಾರ್ಯದರ್ಶಿ ದೇವರಾಜಯ್ಯ, ಉಪಾಧ್ಯಕ್ಷರಾದ ವಿಶ್ವಭಾರತಿ ಮೂರ್ತಿ, ಮರಿಚೆನ್ನಮ್ಮ, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.