More

  ಬಿಸಿಎಂ ಹಾಸ್ಟೆಲ್‌ಗಳಿಗೆ ಸಿದ್ಧಗಂಗಾ ಮಠದ ಅಕ್ಕಿ ಕಡ!?; ಅಧಿಕಾರಿಗಳ ಸ್ಪಷ್ಟನೆ ಬಳಿಕ ತಣ್ಣಗಾದ ವಿವಾದ; ವಾಡಿಕೆಯಂತೆ ಮರು ಹೊಂದಾಣಿಕೆ

  ತುಮಕೂರು: ನಗರದ ಬಿಸಿಎಂ ಹಾಸ್ಟೆಲ್‌ಗಳಿಗೆ ಪಡಿತರ ಅಕ್ಕಿ ಪೂರೈಕೆ ತಡವಾಗಿದೆ ಎಂಬ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದ ಹಾಸ್ಟೆಲ್‌ಗಳಿಗೆ ಪೂರೈಕೆಯಾಗಿದ್ದ ಅಕ್ಕಿಯನ್ನು ಕಡವಾಗಿ ಪಡೆದಿದ್ದ ಬಿಸಿಎಂ ಇಲಾಖೆಯ ನಡೆ ಚರ್ಚೆಗೆ ಗ್ರಾಸವಾಗಿದೆ.

  ಆಹಾರ ಇಲಾಖೆ ವತಿಯಿಂದ ಬಿಸಿಎಂ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಕೆ ಹಾಸ್ಟೆಲ್‌ಗಳಿಗೆ ವರ್ಷದಲ್ಲಿ ಎರಡು ಭಾರಿ ಸಾಕಾಗವಷ್ಟು ಅಕ್ಕಿಯನ್ನು ಕೆಎಫ್‌ಸಿ ಗೋದಾಮು ಮೂಲಕವೇ ಪೂರೈಕೆ ಮಾಡಲಾಗುತ್ತಿದೆ.

  ಕೆಲವು ಹಾಸ್ಟೆಲ್‌ಗಳಲ್ಲಿ ಅಕ್ಕಿಯ ಸಮಸ್ಯೆ ಎದುರಾದಾಗ ಗೋದಾಮಿನಲ್ಲಿಯೂ ತಕ್ಷಣಕ್ಕೆ ಲಭ್ಯವಿಲ್ಲದ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಗೋದಾಮಿನಿಂದ ಅಕ್ಕಿಯನ್ನು ಮರುಹೊಂದಾಣಿಕೆ ಮಾಡಿಕೊಳ್ಳುವ ವಾಡಿಕೆ ಜಿಲ್ಲೆಯಲ್ಲಿ ಹಿಂದಿನಿAದಲೂ ರೂಢಿಯಲ್ಲಿದ್ದು ಪಡೆದ ಅಕ್ಕಿಯನ್ನು ಇಲಾಖೆಗಳು ಸಕಾಲದಲ್ಲಿ ಮರುಪಾವತಿ ಮಾಡಿರುವುದನ್ನು ಸಿದ್ಧಗಂಗಾ ಮಠದ ಮೂಲಗಳೇ ಖಚಿತಪಡಿಸಿವೆ.

  ಕಳೆದ ಡಿಸೆಂಬರ್‌ನಲ್ಲಿ ತುಮಕೂರಿನ ವಿವಿಧ ಹಾಸ್ಟೆಲ್‌ಗಳಿಗೆ ಅಗತ್ಯವಿದ್ದ 500ಚೀಲ ಅಕ್ಕಿಯನ್ನು ಸಿದ್ಧಗಂಗಾ ಮಠದಿಂದ ಬಿಸಿಎಂ ಇಲಾಖೆ ಕಡವಾಗಿ ಪಡೆದುಕೊಂಡಿದ್ದು ಮಾರ್ಚ್ ಅಂತ್ಯಕ್ಕೆ ಈ ಅಕ್ಕಿಯನ್ನು ಮರುಹೊಂದಾಣಿಕೆ ಮಾಡಿಕೊಳ್ಳಲಿದೆ.

  ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಗೂ ಸರ್ಕಾರದಿಂದಲೇ ಅಕ್ಕಿ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಕಿಯ ಮರುಹೊಂದಾಣಿಕೆ ಪ್ರಕ್ರಿಯೆ ಸಾಮಾನ್ಯ ಪ್ರಕ್ರಿಯೆ ಎನ್ನಿಸಿದೆ.
  ಕೆಲವು ಮಾಧ್ಯಮಗಳಲ್ಲಿ ಮಠದಿಂದ ಹಾಸ್ಟೆಲ್‌ಗಳಿಗೆ ಅಕ್ಕಿ ಪಡೆದಿರುವ ವಿಷಯ ಪ್ರಕಟವಾದ ನಂತರ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

  ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಜತೆಗೆ ಮಠದ ಆಡಳಿತ ಮಂಡಳಿ ಕೂಡ ಇದೊಂದು ಸಾಮಾನ್ಯವಾದ ವಾಡಿಕೆಯಂತೆ ನಡೆದುಕೊಂಡು ಬಂದಿರುವ ಮರುಹೊಂದಾಣಿಕೆ ಪ್ರಕ್ರಿಯೆಯಷ್ಟೇ ಎಂದು ಸ್ಪಷ್ಟನೆ ನೀಡಿದ ಬಳಿದ ವಿವಾದಕ್ಕೆ ತೆರೆಬಿದ್ದಿದೆ.

  ಜಿಲ್ಲೆಯ ಯಾವುದೇ ಹಾಸ್ಟೆಲ್‌ನಲ್ಲಿಯೂ ಅಕ್ಕಿ ಅಥವಾ ಗೋಧಿಗೆ ಸಮಸ್ಯೆಯಾಗಿಲ್ಲ, ಕೆಎಫ್‌ಸಿಯಿಂದ ಸರಬರಾಜು ತಡವಾದಾಗ ಮರುಹೊಂದಾಣಿಕೆ ಮಾಡಿಕೊಳ್ಳುವುದು ವಾಡಿಕೆ. ಸಿದ್ಧಗಂಗಾ ಮಠದಲ್ಲಿಯೂ ಹಾಸ್ಟೆಲ್‌ಗೆ ಕೆಎಫ್‌ಸಿ ಗೋದಾಮಿನಿಂದಲೇ ಅಕ್ಕಿ ಪೂರೈಕೆ ಮಾಡುವುದರಿಂದ ಮರುಹೊಂದಾಣಿಕೆ ಪ್ರಕ್ರಿಯೆ ಹೊಸತೇನಲ್ಲ.
  ಗಂಗಪ್ಪ
  ಜಿಲ್ಲಾ ಅಧಿಕಾರಿ, ಬಿಸಿಎಂ ಇಲಾಖೆ

  ಜಿಲ್ಲೆಯ ಎಲ್ಲಾ ಹಾಸ್ಟೆಲ್‌ಗಳಿಗೂ ಬೇಡಿಕೆಗೆ ಅನುಗುಣವಾಗಿ ಅಕ್ಕಿ ಹಾಗೂ ಗೋಧಿಯನ್ನು ಸಕಾಲದಲ್ಲಿ ಪೂರೈಸಲಾಗಿದ್ದು ಯಾವುದೇ ಸಮಸ್ಯೆ ಇಲ್ಲ. ಸಿದ್ಧಗಂಗಾ ಮಠಕ್ಕೂ ನಮ್ಮಿಂದಲೇ ನಿರ್ಧಿಷ್ಟ ಪ್ರಮಾಣದ ಅಕ್ಕಿ ಪೂರೈಸಲಾಗಿದೆ. ಈ ನಡುವೆ ಆಯಾ ಇಲಾಖೆಯವರು ಮರುಹೊಂದಾಣಿಕೆ ಮಾಡಿಕೊಂಡಿರಬಹುದು.
  ಮಂಟೇಸ್ವಾಮಿ
  ಜಂಟಿ ನಿರ್ದೇಶಕ, ಆಹಾರ ಇಲಾಖೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts