More

    ತುಳು ಬಾನುಲಿ ಕೇಂದ್ರ ಸ್ಥಾಪನೆ

    ಹರೀಶ್ ಮೋಟುಕಾನ ಮಂಗಳೂರು
    ತುಳು ಭಾಷೆ ಹಾಗೂ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ತುಳು ಸಮುದಾಯ ಬಾನುಲಿ ಕೇಂದ್ರ ಸ್ಥಾಪನೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯೋಜನೆ ರೂಪಿಸಿದೆ.

    ರಂಗಕಲೆ, ಯಕ್ಷಗಾನ, ನಾಟಕ, ಪಾಡ್ದನ ಸೇರಿದಂತೆ ತುಳುನಾಡಿನ ಕಲೆ ವಿಸ್ತಾರವಾಗಿದೆ. ಎಲ್ಲ ವಿಭಾಗಗಳ ಕಲಾವಿದರನ್ನು ಬಾನುಲಿ ಕೇಂದ್ರಕ್ಕೆ ಆಹ್ವಾನಿಸಿ ಅವರ ಕಲೆಗಳನ್ನು ದಾಖಲೀಕರಣ ಮಾಡಿ, ಅದನ್ನು ಪ್ರಸಾರ ಮಾಡುವ ಮೂಲಕ ತುಳು ಭಾಷೆಯ ಬೆಳವಣಿಗೆಗೆ ಶ್ರಮಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

    ತುಳುನಾಡಿನಲ್ಲಿ ಪಾಡ್ದನ ಸೇರಿದಂತೆ ಶೇ.70ರಷ್ಟು ಸಾಹಿತ್ಯ ಪ್ರಸ್ತುತ ಮೌಖಿಕವಾಗಿದೆ. ಪ್ರಸಿದ್ಧ ಪಾಡ್ದನ ಹಾಡುವವರಿದ್ದಾರೆ. ಅನಕ್ಷರಸ್ಥರಾಗಿರುವ ಅವರಿಗೆ ಅದನ್ನು ಬರೆಯಲು ಆಗುತ್ತಿಲ್ಲ. ಹಾಗಾಗಿ ಅದನ್ನು ಧ್ವನಿಮುದ್ರಣ ಮಾಡುವ ಮೂಲಕ ದಾಖಲೀಕರಣ ಆಗಬೇಕಾಗಿದೆ. ಸಮುದಾಯ ಬಾನುಲಿ ಕೇಂದ್ರ ನಿರ್ಮಾಣವಾದರೆ ಉತ್ತಮ ಸ್ಟುಡಿಯೋ ನಿರ್ಮಾಣವಾಗುತ್ತದೆ. ಅಲ್ಲಿ ಮೌಖಿಕ ಸಾಹಿತ್ಯಗಳನ್ನು ದಾಖಲೀಕರಣ ಮಾಡಲು ಸಾಧ್ಯವಾಗಲಿದೆ.

    ತುಳು ಭಾಷೆಗೆ ಪೂರಕವಾದ ಕಲೆಗಳನ್ನು ದಾಖಲೀಕರಣ ಮಾಡುವ ಕಲಾವಿದರಿಗೆ ಕಡಿಮೆ ವೆಚ್ಚದಲ್ಲಿ ಸ್ಟುಡಿಯೋ ಕೂಡ ಲಭ್ಯವಾಗಲಿದೆ. ಅಗತ್ಯವಿದ್ದಾಗ ಬಂದು ರೆಕಾರ್ಡಿಂಗ್ ಮಾಡಿಕೊಂಡು ಹೋಗಬಹುದು. ಬಾನುಲಿಯಲ್ಲಿ ಪ್ರಸಾರವಾಗುವ ಜತೆಗೆ ದಾಖಲೀಕರಣವೂ ಆಗಲಿದೆ.

    ಅಕಾಡೆಮಿ ಕಟ್ಟಡದಲ್ಲಿ ಸ್ಟುಡಿಯೋ
    ಉರ್ವ ಸ್ಟೋರ್‌ನಲ್ಲಿರುವ ತುಳು ಅಕಾಡೆಮಿಯ ಸುಸಜ್ಜಿತ ಕಟ್ಟಡದಲ್ಲಿ ಸಮುದಾಯ ಬಾನುಲಿ ಕೇಂದ್ರ ಸ್ಥಾಪಿಸುವ ಯೋಜನೆ ಇದೆ. ಟ್ರಾನ್ಸ್‌ಮಿಶನ್ ಗೋಪುರ, ಮ್ಯೂಸಿಕ್ ಟೈಪ್ ಹಾಗೂ ಟಾಕ್‌ಟೈಪ್ ಮಲ್ಟಿಪರ್ಪಸ್ ಸ್ಟುಡಿಯೋ ನಿರ್ಮಾಣ ಮಾಡಲು ಕಟ್ಟಡದಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ತುಳು ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆಯುವ ನಿಟ್ಟಿನಲ್ಲೂ ಸಮುದಾಯ ಬಾನುಲಿ ಕೇಂದ್ರ ಸಹಕಾರಿಯಾಗುವ ನಿರೀಕ್ಷೆಗಳಿವೆ.

    50 ಲಕ್ಷ ರೂ. ಪ್ರಸ್ತಾವನೆ: ತುಳು ಸಮುದಾಯ ಬಾನುಲಿ ನಿರ್ಮಾಣಕ್ಕೆ 50 ಲಕ್ಷ ರೂ. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಇದರ ಅನುಷ್ಠಾನ ಮಾಡುವ ನಿರೀಕ್ಷೆ ಹೊಂದಲಾಗಿದೆ. ಈ ಯೋಜನೆ ಅನುಷ್ಠಾನವಾದರೆ ತುಳು ಭಾಷೆಗೆ ದೊಡ್ಡ ಮಟ್ಟದ ಕೊಡುಗೆ ಲಭ್ಯವಾದಂತಾಗುತ್ತದೆ.

    12 ಗಂಟೆ ಪ್ರಸಾರ: ಸಮುದಾಯ ಬಾನುಲಿ ಕೇಂದ್ರದ ಪ್ರಸಾರ ವ್ಯಾಪ್ತಿ ನಗರಕ್ಕೆ ಸೀಮಿತ. ನಾಲ್ಕೈದು ಕಿ.ಮೀ.ವರೆಗೆಗಿನ ಕೇಳುಗರಿಗೆ ಅನುಕೂಲ. ಆ್ಯಪ್ ರೂಪಿಸಿದರೆ ಎಲ್ಲಿ ಬೇಕಾದರೂ ಕೇಳಬಹುದು. ತುಳು ಸಮುದಾಯ ಬಾನುಲಿ ಕೇಂದ್ರ ಮೊದಲ ಹಂತದಲ್ಲಿ 12 ಗಂಟೆ ಪ್ರಸಾರ ಯೋಜನೆ ಇದೆ. ತುಳು ಭಾಷೆಗೆ ಸಂಬಂಧಪಟ್ಟ ಎಲ್ಲ ವರ್ಗದವರಿಗೆ ಕಾರ್ಯಕ್ರಮ ಪ್ರಸ್ತುತಪಡಿಸಲು ಅವಕಾಶ ಸಿಗಲಿದೆ.

    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ತುಳು ಸಮುದಾಯ ಬಾನುಲಿ ಕೇಂದ್ರ ನಿರ್ಮಿಸುವ ಯೋಜನೆ ಇದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಬಗ್ಗೆ ನಿರಂತರ ಫಾಲೋಅಪ್ ಮಾಡಿ ಬಜೆಟ್‌ನಲ್ಲಿ ಸೇರಿಸಲು ಪ್ರಯತ್ನಿಸಲಾಗುವುದು. ಇಲ್ಲಿನ ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ಒತ್ತಡ ಹಾಕಲಾಗುವುದು.
    – ದಯಾನಂದ ಕತ್ತಲ್‌ಸಾರ್, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts