ಕಲಾದಗಿ: ಹುಮ್ಮಸ್ಸಿನಿಂದ ಹೊಂಡಕ್ಕೆ ಧುಮುಕುತ್ತಿದ್ದ ಜನ, ಜಬರಿಯಿಂದ ಹೊಡೆಯಲು ಬಂದವರಿಗೆ ನೀರೆರುಚುತ್ತ ಹಿಂದೆ ಸರಿಸುತ್ತಿದ್ದ ಹೊಂಡದಲ್ಲಿದ್ದ ಯುವಕರು, ಅದೆಲ್ಲವನ್ನು ನೋಡುತ್ತ ಸಂತೋಷದಿಂದ ಗೋವಿಂದ..ಗೋವಿಂದ..ಗೋವಿಂದಾ..ಎಂದು ಹಷೋದ್ಗಾರ ಹಾಕುತ್ತಿದ್ದ ಜನಸ್ತೋಮ, ಇವುಗಳ ನಡುವೆ ಗಮನ ಸೆಳೆದ ದೇವರ ಕುದುರೆ ‘ತುಳಸೀಗೆರೆಪ್ಪ’..!

ಸಮೀಪದ ಸುಪ್ರಸಿದ್ಧ ಮಾರುತಿ ಕ್ಷೇತ್ರವಾದ ತುಳಸಿಗೇರಿಯಲ್ಲಿ ಸೋಮವಾರ ಸಂಜೆ ಕಂಡುಬಂದ ಓಕುಳಿಯ ಸಂಭ್ರಮದ ನೋಟ.
ಸಂಪ್ರದಾಯದಂತೆ ಬಾಬುದಾರರ ಸಮ್ಮುಖದಲ್ಲಿ ದೇವಾಲಯದ ಪೂಜಾರರು ಸೋಮವಾರ ಸಂಜೆ ಹೊಂಡದ ಪೂಜೆ ನೆರವೇರಿಸುತ್ತಿದ್ದಂತೆ ಭಕ್ತರು ಓಡಿ ಬಂದು ಪುಟ್ಟ ಹೊಂಡದಲ್ಲಿ ಜಿಗಿದು ಓಕುಳಿಯಾಡಿದರು.
ನೀರ ಬೂದಿಹಾಳದ ಶ್ರೀಮಂತ ದೇಸಾಯಿ ಮನೆತನದ ಪ್ರಮುಖರು, ದೇಗುಲದ ಅರ್ಚಕರು, ಬಾಬುದಾರರು ಮತ್ತು ಊರ ಹಿರಿಯರು ಓಕುಳಿಯಲ್ಲಿ ಪಾಲ್ಗೊಂಡಿದ್ದರು.
ದೇವರ ಕುದುರೆ ಕುಣಿತ:ಇದೇ ಮೊದಲ ಬಾರಿಗೆ ತುಳಸಿಗೇರಿ ಮಾರುತೇಶ್ವರನ ಓಕುಳಿಗೆ ಬಂದ ನೀರಬೂದಿಹಾಳ ದೇಸಾಯರ ಮನೆತನದ ದೇವರ ಕುದುರೆ ಪಂಚಕಲ್ಯಾಣಿ ‘ತುಳಸಿಗೇರೆಪ್ಪ’ನ ಆಕರ್ಷಕ ಕುಣಿತ ನೆರೆದ ಜನಸ್ತೋಮದ ಗಮನ ಸೆಳೆಯಿತು.
ಆಕರ್ಷಕ ದಿರಿಸು ತೊಟ್ಟು ಪಲ್ಲಕ್ಕಿ ಮಹೋತ್ಸವ ಮುಂದೆ, ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲಿ ಸಂಪ್ರದಾಯದಂತೆ ಪಾಲ್ಗೊಂಡಿದ್ದ ತುಳಸಿಗೇರೆಪ್ಪ ಭಾರಿ ಜನಸ್ತೋಮದ ನಡುವೆ ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದ್ದು, ಮೇಲಿಂದ ಮೇಲೆ ತನ್ನೆರಡು ಕಾಲು ಮೇಲಕ್ಕೆತ್ತಿ ವಾದ್ಯಕ್ಕೆ ತಕ್ಕಂತೆ ಕುಣಿದಿದ್ದು ಎಲ್ಲರ ಗಮನ ಸೆಳೆಯಿತು.