More

  ವೃಕ್ಷ ಮಾತೆ, ಅಕ್ಷರ ಸಂತನಿಗೆ ಪದ್ಮಶ್ರೀ ಪುರಸ್ಕಾರ

  ಲಕ್ಷಾಂತರ ಗಿಡ ಬೆಳೆಸಿ, ಪೋಷಿಸಿ ವೃಕ್ಷ ಮಾತೆ ಎನಿಸಿದವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ. 25ನೇ ವಯಸ್ಸಿನಲ್ಲಿ ತಮ್ಮದೇ ಊರಿನ ಅರಣ್ಯ ಇಲಾಖೆ ನರ್ಸರಿಯಲ್ಲಿ ಸಂಬಳಕ್ಕಾಗಿ ಗಿಡಗಳನ್ನು ಬೆಳೆಸುವ ಕಾರ್ಯ ಪ್ರಾರಂಭಿಸಿದ ತುಳಸಿ, ನಂತರ ಪರಿಸರದ ಒಂದು ಭಾಗವಾಗಿ ಹೋದರು. ಗಿಡಗಳನ್ನು ಮಕ್ಕಳಂತೆ ನೋಡಲಾರಂಭಿಸಿದರು. ಬೀಜ ಹಾಕುವುದರಿಂದ ಹಿಡಿದು ನೆಟ್ಟು, ನೀರು ಹಾಕಿ ಬೆಳೆಸಿ ರಕ್ಷಿಸಿ ಮರವಾಗಿಸುವವರೆಗೂ ಕಾಳಜಿ ವಹಿಸಿದರು. 30 ವರ್ಷಗಳಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ಬೆಳೆಸಿದ ಕೀರ್ತಿ ಇವರದ್ದು. ಮನೆಯಲ್ಲಿ ಕಾಡುತ್ತಿದ್ದ ಬಡತನ ನನ್ನನ್ನು ನರ್ಸರಿ ಕೆಲಸಕ್ಕೆ ಕೊಂಡೊಯ್ದಿತು. ಪ್ರಾರಂಭದಲ್ಲಿ ದಿನಕ್ಕೆ 1 ರೂ. ಸಂಬಳ ನೀಡುತ್ತಿದ್ದರು. ದಿನ ಕಳೆಯುತ್ತಿದ್ದಂತೆ ನನಗೆ ಗಿಡ-ಮರಗಳ ಮೇಲೆ ಪ್ರೀತಿ ಮೂಡಲು ಕಾರಣವಾಯಿತು ಎಂದು ಹೇಳುತ್ತಾರೆ ತುಳಸಿ ಗೌಡ. ಈಗ 80 ವರ್ಷವಾಗಿದ್ದರೂ ನರ್ಸರಿಗೆ ಭೇಟಿ ನೀಡಿ ನಾನು ನೆಟ್ಟ ಗಿಡ-ಮರಗಳನ್ನು ನೋಡಿಕೊಂಡು ಬರುತ್ತೇನೆ ಎನ್ನುತ್ತಾರವರು. ತುಳಸಿ ಗೌಡ ಅಕ್ಷರ ಕಲಿತವರಲ್ಲ. ಆದರೆ, ಅವರ ಪರಿಸರ ಪ್ರೇಮದ ಕುರಿತಾಗಿ 6ನೇ ತರಗತಿ ವಿದ್ಯಾರ್ಥಿಗಳ ಪಠ್ಯದಲ್ಲಿ ಪಾಠವೊಂದನ್ನು ಸೇರಿಸಲಾಗಿದೆ.

  ಅಕ್ಷರ ಸಂತ ಹರೇಕಳ ಹಾಜಬ್ಬ

  ಮಂಗಳೂರಿನಲ್ಲಿ ಕಿತ್ತಳೆ ವ್ಯಾಪಾರ ಮಾಡಿಕೊಂಡು ಹುಟ್ಟೂರು ಹರೇಕಳದಲ್ಲಿ ಶಾಲೆ ನಿರ್ವಿುಸಿ ‘ಅಕ್ಷರ ಸಂತ’ನೆಂದೇ ಜನಪ್ರಿಯರಾದವರು ಹರೇಕಳ ಹಾಜಬ್ಬ. 1955ರಲ್ಲಿ ಜನಿಸಿದ ಹಾಜಬ್ಬ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ತನ್ನೂರಿನ ಮಕ್ಕಳು ಶಿಕ್ಷಣವಂತರಾಗಬೇಕೆಂದು ಪಣ ತೊಟ್ಟವರು. ಕಿತ್ತಳೆ ಮಾರುವಾಗ ಇಂಗ್ಲಿಷ್ ಮಾತ್ರವಲ್ಲ, ಕನ್ನಡ ಕೂಡ ಸರಿಯಾಗಿ ಬಾರದಿರುವುದು ವಿದ್ಯಾಭ್ಯಾಸದ ಕೊರತೆಯನ್ನು ಎತ್ತಿ ತೋರಿಸಿತ್ತು. ಈ ಸ್ಥಿತಿ ನನ್ನೂರಿನ ಮುಂದಿನ ಪೀಳಿಗೆಗೆ ಆಗಬಾರದೆಂದು ನಿರ್ಧರಿಸಿ ಸರ್ಕಾರಿ ಶಾಲೆ ಆರಂಭಕ್ಕೆ ಮುಂದಾದರು. 1999ರಲ್ಲಿ ಹರೇಕಳ ನ್ಯೂಪಡ್ಪುವಿನ ಮದರಸದಲ್ಲಿ 1ನೇ ತರಗತಿ ಆರಂಭ, ಬಳಿಕ ಸ್ವಂತ ಕಟ್ಟಡ ನಿರ್ವಣ, 2008ರಲ್ಲಿ ಪ್ರೌಢಶಾಲೆ ಆರಂಭ. ಈಗ 1ರಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸದ ಅವಕಾಶ ಹಾಜಬ್ಬ ನಿರ್ವಿುಸಿದ ಶಾಲೆಯಲ್ಲಿದೆ. ಇದರಲ್ಲಿ ಸರ್ಕಾರದ ಜಮೀನು ಹೊರತುಪಡಿಸಿ ಉಳಿದೆಲ್ಲ ಹಣ ಹಾಜಬ್ಬ ಕಿತ್ತಳೆ ಮಾರಿಯೇ ಬಂದದ್ದು ಮತ್ತು ದಾನಿಗಳು ನೀಡಿರುವುದು. ಇವರ ಸಾಧನೆಗಾಗಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಅನಕ್ಷರಸ್ಥನಾಗಿದ್ದರೂ ಹಲವು ವಿಶ್ವವಿದ್ಯಾಲಯದ ಪಠ್ಯದಲ್ಲಿ ಸ್ಥಾನ ಪಡೆದಿದ್ದಾರೆ. ಬಿಬಿಸಿ ರೇಡಿಯೋ ಸಂದರ್ಶನ ಮಾಡಿದೆ. ದಾನಿಗಳು ನಿರ್ವಿುಸಿಕೊಟ್ಟ ಮನೆಯಲ್ಲಿ ಹಾಜಬ್ಬ ಈಗ ವಾಸವಾಗಿದ್ದಾರೆ.

  ದೆಹಲಿಯಿಂದ ಗೃಹ ಇಲಾಖೆ ಅಧಿಕಾರಿಗಳು ಕರೆ ಮಾಡಿದಾಗ ನನಗೆ ಏನೆಂದು ತಿಳಿಯಲಿಲ್ಲ. ಸಾಯಂಕಾಲ ಅಪರ ಜಿಲ್ಲಾಧಿಕಾರಿ ಕರೆ ಮಾಡಿ ವಿಷಯ ತಿಳಿಸಿದರು. ಪದ್ಮಶ್ರೀ ಪ್ರಶಸ್ತಿ ಬಂದಿರುವುದನ್ನು ಕೇಳಿ ಮಾತೇ ಬರುತ್ತಿಲ್ಲ. ನಂಬಲಾಗುತ್ತಿಲ್ಲ. ನಯಾಪೈಸೆ ಬೆಲೆ ಇಲ್ಲದ ಮನುಷ್ಯ ನಾನು.

  | ಹರೇಕಳ ಹಾಜಬ್ಬ

  ವೈದ್ಯಕೀಯ ಕ್ಷೇತ್ರದ ಸಾಧಕ

  ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ, ಪ್ರಸ್ತುತ ನಿಮ್ಹಾನ್ಸ್ ಸಂಸ್ಥೆ ನಿರ್ದೇಶಕರಾಗಿರುವ ಡಾ.ಬಿ.ಎನ್. ಗಂಗಾಧರ್ ಕ್ಲಿನಿಕಲ್ ಹಾಗೂ ಅಕಾಡಮಿಕ್ ಕ್ಷೇತ್ರದಲ್ಲಿ 30 ವರ್ಷ ಅನುಭವ ಹೊಂದಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ನಿಮ್ಹಾನ್ಸ್​ನಲ್ಲಿ ಮನಶಾಸ್ತ್ರ ಕುರಿತು ಎಂಡಿ ವಿದ್ಯಾಭ್ಯಾಸ. ಬಳಿಕ 1982ರಲ್ಲಿ ಅದೇ ಸಂಸ್ಥೆಗೆ ಸೇರ್ಪಡೆಯಾದರು. ಎಲೆಕೊ್ಟ್ರೕ ಕನ್​ಕ್ಲೂಸಿವ್ ಥೆರಪಿ (ಇಸಿಟಿ), ಸಾರ್ವಜನಿಕ ಆರೋಗ್ಯ, ಮಾನಸಿಕ ಅನಾರೋಗ್ಯ ಇರುವವರ ಮೆದುಳಿನಲ್ಲಿ ಆಗುವ ತೊಂದರೆಗಳು, ಯೋಗ ಮತ್ತು ಯೋಗದಿಂದಾಗುವ ಪರಿಣಾಮಗಳ ಬಗ್ಗೆ ಸಂಶೋಧನೆಗಳನ್ನು ನಡೆಸಿದ್ದಾರೆ. 50ಕ್ಕೂ ಹೆಚ್ಚು ಎಂಡಿ ಹಾಗೂ ಪಿಎಚ್​ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 300ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

  ಇಲ್ಲಿಯವರೆಗೆ ನಡೆಸುತ್ತಿರುವ ಸಂಶೋಧನೆ ಗಳು, ಕಾರ್ಯವನ್ನು ಮತ್ತಷ್ಟು ತೀವ್ರವಾಗಿ ಕೈಗೊಳ್ಳಲು ಪದ್ಮಶ್ರೀ ಗೌರವದಿಂದ ಸ್ಪೂರ್ತಿ ಸಿಕ್ಕಿದೆ.

  | ಡಾ.ಬಿ.ಎನ್. ಗಂಗಾಧರ್ ನಿರ್ದೇಶಕ, ನಿಮ್ಹಾನ್ಸ್

  ಪತ್ರಿಕೋದ್ಯಮದಲ್ಲಿ ಸಾಹಿತ್ಯ ಸೇವೆ

  ಮೈಸೂರಿನಿಂದ ಪ್ರಕಟವಾಗುವ, ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಸಂಸ್ಕೃತ ದಿನಪತ್ರಿಕೆ ‘ಸುಧರ್ವ’ ಸಂಪಾದಕ ಕೆ.ವಿ.ಸಂಪತ್​ಕುಮಾರ್ ಹಾಗೂ ಅವರ ಪತ್ನಿ ವಿದುಷಿ ಕೆ.ಎಸ್. ಜಯಲಕ್ಷ್ಮೀ ಸಂಪತ್​ಕುಮಾರ್ ಅವರಿಗೆ ಜಂಟಿಯಾಗಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಪತ್ರಿಕೋದ್ಯಮದಲ್ಲಿ ಸಾಹಿತ್ಯ ಮತ್ತು ಶಿಕ್ಷಣ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಸ್ಕೃತವನ್ನು ಜನಪ್ರಿಯಗೊಳಿಸಬೇಕು, ಪ್ರತಿನಿತ್ಯ ಜನರಿಗೆ ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ಪಂಡಿತ್ ವರದರಾಜ ಅಯ್ಯಂಗಾರ್ 1970ರಲ್ಲಿ ಪತ್ರಿಕೆ ಆರಂಭಿಸಿದರು. ಸಂಸ್ಕೃತದಲ್ಲಿ ಪ್ರಕಟಗೊಳ್ಳುತ್ತಿರುವ ಪತ್ರಿಕೆಯನ್ನು ಇವರ ಪುತ್ರ ಸಂಪತ್​ಕುಮಾರ್ ಹಾಗೂ ಸೊಸೆ ಜಯಲಕ್ಷ್ಮೀ ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ‘ಯಾವುದೇ ಅರ್ಜಿ ಹಾಕದಿದ್ದರೂ ಬಂದ ಈ ಪ್ರಶಸ್ತಿಯನ್ನು ನಿರೀಕ್ಷೆ ಮಾಡಿರಲಿಲ್ಲ. ಪ್ರಶಸ್ತಿ ನೀಡಿ ಪುರಸ್ಕರಿಸಿದವರು, ಇದಕ್ಕೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಸಂಪತ್​ಕುಮಾರ್ ಹಾಗೂ ಜಯಲಕ್ಷ್ಮೀ ಅವರು ‘ವಿಜಯವಾಣಿ’ ಜತೆ ಸಂತಸ ಹಂಚಿಕೊಂಡರು.

  ಟ್ಯಾಲಿ ರೆವಲ್ಯೂಷನ್!

  ಉದ್ಯಮ ಲೆಕ್ಕಪತ್ರ ನಿರ್ವಹಣೆಯಲ್ಲಿ ಮುಂಚೂಣಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಭರತ್ ಗೋಯೆಂಕಾ, ಖ್ಯಾತ ಉದ್ಯಮಿ ದಿ.ಶ್ಯಾಮಸುಂದರ ಗೋಯೆಂಕಾ ಅವರ ಪುತ್ರ. ಮೂಲತಃ ಕೊಲ್ಕತ್ತದವರಾದ ಶ್ಯಾಮಸುಂದರ ಗೋಯೆಂಕಾ ಬೆಂಗಳೂರಿಗೆ ಆಗಮಿಸಿ ವಿಜಯ್ ಬಾಬಿನ್ಸ್ ಆಂಡ್ ಇಂಡಸ್ಟ್ರೀಸ್ ಸ್ಥಾಪಿಸಿದರು. ಜವಳಿ ಉದ್ಯಮಕ್ಕೆ ಕಚ್ಚಾ ವಸ್ತು ಮತ್ತು ಯಂತ್ರೋಪಕರಣ ಸರಬರಾಜು ಮಾಡಿಸುತ್ತಿದ್ದ ಸಂಸ್ಥೆಯ ಲೆಕ್ಕಪತ್ರ ನಿರ್ವಹಣೆಗೆ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿಕೊಡುವಂತೆ ಪುತ್ರ ಭರತ್ ಗೋಯೆಂಕಾಗೆ ಪ್ರೇರೇಪಿಸಿದರು. ಲೆಕ್ಕಪತ್ರ ನಿರ್ವಹಣೆಗಾಗಿ ತಂದೆಯವರ ಜತೆ ಸೇರಿ 1986ರಲ್ಲಿ ಪ್ಯೂಟ್ರೋನಿಕ್ಸ್ ಸಂಸ್ಥೆ ಆರಂಭಿಸಿದರು. 1988ರಲ್ಲಿ ಅದಕ್ಕೆ ಟ್ಯಾಲಿ ಎಂದು ಮರುನಾಮಕರಣ ಮಾಡಲಾಯಿತು.

  ಹಾಕಿ ಮಾಂತ್ರಿಕನಿಗೆ ಸಂದ ಗೌರವ

  1972ರ ಮೂನಿಚ್ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ವಿಜೇತ ಭಾರತ ಹಾಕಿ ತಂಡದ ಸದಸ್ಯರಾದ ಎಂ.ಪಿ.ಗಣೇಶ್, ಮೂಲತಃ ಕೊಡಗಿನ ಸುಂಟಿಕೊಪ್ಪದವರು. 70ರ ದಶಕದಲ್ಲಿ ಭಾರತ ಹಾಕಿ ತಂಡದ ಸದಸ್ಯರಾಗಿದ್ದರು. ಭಾರತ ತಂಡದ ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ. 1971ರ ಬಾರ್ಸಿಲೋನಾ ಹಾಗೂ 1973ರಲ್ಲಿ ಆಮ್್ಟರ್​ಡ್ಯಾಂನಲ್ಲಿ ನಡೆದ ಹಾಕಿ ವಿಶ್ವಕಪ್​ನಲ್ಲಿ ಭಾರತ ಪದಕ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 1988ರಲ್ಲಿ ಸಿಯೋಲ್​ನಲ್ಲಿ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡದ ಕೋಚ್ ಆಗಿದ್ದರು. 73 ವರ್ಷದ ಮಾಜಿ ಆಟಗಾರ, ಕ್ರೀಡಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 1973ರಲ್ಲೇ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. 1969ರಿಂದ 74ರವರೆಗೆ ರಾಷ್ಟ್ರೀಯ ತಂಡದ ಪರ 100ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದಾರೆ.

  ಪುರಸ್ಕೃರಿಗೆ ಸಿಎಂ ಬಿಎಸ್​ವೈ ಅಭಿನಂದನೆ

  ಬೆಂಗಳೂರು: ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಘೊಷಣೆಯಾಗಿರುವುದಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಎಂ.ಪಿ. ಗಣೇಶ್, ಡಾ. ಗಂಗಾಧರ್, ಭರತ್ ಗೋಯೆಂಕಾ, ಡಾ.ವಿಜಯ ಸಂಕೇಶ್ವರ, ತುಳಸಿ ಗೌಡ, ಹರೇಕಳ ಹಾಜಬ್ಬ, ಸಂಪತ್ ಕುಮಾರ್ ಮತ್ತು ಕೆ.ಎಸ್. ಜಯಲಕ್ಷ್ಮಿ ಅವರಿಗೆ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಈ ಎಲ್ಲ ಗಣ್ಯರ ಸಾಧನೆ ಇತರರಿಗೆ ಸ್ಪೂರ್ತಿಯಾಗಲಿ ಎಂದು ಆಶಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts