ಸೊರಬ: ಸರ್ಕಾರ ಜಾರಿ ತರುವ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ನೌಕರರ ಸಹಕಾರ ಮುಖ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ರಂಗ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಹಾಗೂ ನೌಕರರ ನಡುವೆ ಸಮನ್ವಯ ಇದ್ದಾಗ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದರು.
ನಿವೃತ್ತ ನೌಕರರು ಸಂಧ್ಯಾ ಕಾಲದಲ್ಲಿ ಪರಸ್ಪರ ತಮ್ಮ ಅನುಭವ, ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಭವನದ ಅವಶ್ಯವಿದೆ. ಈ ನಿಟ್ಟಿನಲ್ಲಿ 7ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಆಗಿರುವ ನಷ್ಟ ಸರಿದೂಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆ ಮುಂದುವರಿಸಲು ನಿರ್ಲಕ್ಷ್ಯತೋರುವುದಿಲ್ಲ. ತಾಲೂಕಿನ ಜನರ ಸಲಹೆ, ಸಹಕಾರ ಬೇಕು. ನಿವೃತ್ತ ನೌಕರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು, ನಿವೇಶನ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ನಿವೃತ್ತ ನೌಕರರ ತಾಲೂಕು ಸಂಘದ ಅಧ್ಯಕ್ಷ ಕಲ್ಲಪ್ಪ, ಉಪಾಧ್ಯಕ್ಷ ಬಸವಣ್ಯಪ್ಪ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಇಒ ಡಾ.ಪ್ರದೀಪ್‌ಕುಮಾರ್, ಬಿಇಒ ಆರ್.ಪುಷ್ಪಾ, ಎಸ್.ಎಲ್.ಗಂಗಾಧರಪ್ಪ, ಷಣ್ಮುಖಪ್ಪ, ಗೋಪಾಲಪ್ಪ, ಆರ್.ಹನುಮಂತಪ್ಪ, ಗಿರಿಯಪ್ಪ, ರಾಮಚಂದ್ರ ಜೋಯಿಸ್, ಜಯಪ್ಪ, ಕೃಷ್ಣಮೂರ್ತಿ, ಶಿವಪ್ಪ, ಕುಬೇರಪ್ಪ ಇತರರಿದ್ದರು.