ಶಂಕರ್ ಪೂಜಾರಿ ಬಿಡುಗಡೆಗೆ ಶಕ್ತಿಮೀರಿ ಯತ್ನ

ಉಡುಪಿ: ಕುವೈಟ್‌ಗೆ ನಿಷೇಧಿತ ಔಷಧ ತೆಗೆದುಕೊಂಡು ಹೋಗಿ ಬಂಧಿಯಾಗಿರುವ ಕುಂದಾಪುರ ಬಸ್ರೂರು ಗ್ರಾಮದ ಶಂಕರ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿ ನಾನು ತಪ್ಪಿತಸ್ಥನಲ್ಲ, ಅವರ ಬಿಡುಗಡೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೀಪು ಚಾಲಕರಾಗಿರುವ ಮುಬಾರಕ್ ತಿಳಿಸಿದ್ದಾರೆ.
ಕುವೈಟ್‌ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಶಂಕರ ಪೂಜಾರಿ ಅವರು ನನ್ನ ಅತ್ತೆ ತಸ್ಲೀಮ್ ಫಾತಿಮಾ ಪರಿಚಯಸ್ಥರಾಗಿದ್ದಾರೆ. ಶಂಕರ ರಜೆಯಲ್ಲಿ ಊರಿಗೆ ಬಂದಾಗ ಅತ್ತೆಗೆ ಬೆನ್ನು ನೋವಿನ ಔಷಧ ಹಾಗೂ ನರ, ಗ್ಯಾಸ್ಟ್ರಿಕ್‌ಗೆ ಸಂಬಂಧಿಸಿದ ಮತ್ತು ಮನೆಯಲ್ಲಿ ತಯಾರಿಸಿದ ಔಷಧ, ಸಿಹಿ ಮಿಠಾಯಿಗಳನ್ನು ಕಳುಹಿಸಿದ್ದೇನೆ. ಔಷಧ ಕೊಡುವಾಗ ಮೆಡಿಕಲ್ ಸಂಸ್ಥೆಯ ಬಿಲ್ ಮತ್ತು ವೈದ್ಯರು ಬರೆದ ಡಿಸ್ಕ್ರಿಪ್ಶನ್ ದಾಖಲೆ ನೀಡಿದ್ದೆವು. ಆದರೆ ಅವರು ಮನೆಯಲ್ಲೆ ಬಿಟ್ಟು ಹೋಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಂಕರ ಪೂಜಾರಿ ಬಂಧನವಾಗಿ 20 ದಿನಗಳ ನಂತರ ನಮಗೆ ವಿಷಯ ತಿಳಿಯಿತು. ಬಳಿಕ ಮಾತ್ರೆಗಳ ಬಿಲ್, ದಾಖಲೆ ಹಿಡಿದು ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಅವರನ್ನು ಸಂಪರ್ಕಿಸಿ ಕುವೈಟ್‌ನ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಶಂಕರ ಪೂಜಾರಿ ಅವರ ಬಿಡುಗಡೆಗೆ ಎಲ್ಲ ಪ್ರಯತ್ನ ಮಾಡಿದ್ದೇವೆ. ಆದರೆ ಈ ಬಗ್ಗೆ ತಿಳಿಯದ ಶಂಕರ ಪೂಜಾರಿ ಅವರ ಪತ್ನಿ, ನಾವು ಏನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸರ್ ಅಹಮ್ಮದ್ ಅವರು ಸತ್ಯಾಂಶ ತಿಳಿಯದೆ ಆರೋಪ ಮಾಡುತ್ತಿದ್ದಾರೆ. ಕುವೈಟ್‌ನಲ್ಲಿ ಆ ಮಾತ್ರೆಗಳಿಗೆ ನಿಷೇಧವಿದೆ ಎಂದು ನಮಗೆ ತಿಳಿದಿರಲಿಲ್ಲ ಎಂದು ಮುಬಾರಕ್ ತಿಳಿಸಿದರು. ದಸಂಸ ಮುಖಂಡ ಗೋಪಾಲ ಸುದ್ದಿಗೋಷ್ಠಿಯಲ್ಲಿದ್ದರು.
ಕರವೇ ಅಧ್ಯಕ್ಷನಿಂದ 1.50 ಲಕ್ಷ ರೂ.ಬೇಡಿಕೆ: ಪ್ರಕರಣದ ಕುರಿತಾಗಿ ದೂರವಾಣಿ ಕರೆ ಮಾಡಿದ ಕರವೇ ಅಧ್ಯಕ್ಷ ಅನ್ಸರ್ ಅಹಮ್ಮದ್ ಸಮಸ್ಯೆ ಪರಿಹಾರಕ್ಕೆ 1.50 ಲಕ್ಷ ರೂ. ಹಣ ಕೊಡುವಂತೆ ಕೇಳಿದ್ದಾರೆ ಎಂದು ಅಬೂಬಕ್ಕರ್ ಆರೋಪಿಸಿದರು. ಶಂಕರ ಪೂಜಾರಿಗೆ ಅವರಿಗೆ ನೀಡಿದ ಮಾತ್ರೆಗಳ ಬಿಲ್, ವೈದ್ಯರ ಚೀಟಿಗಳ ದಾಖಲೆ ಜತೆಗೆ 1.50 ಲಕ್ಷ ರೂ. ಕೊಡಬೇಕು, ಬಳಿಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸೋಣ ಎಂದರು. ಅದಾದ ಬಳಿಕ ಮೂರ್ನಾಲ್ಕು ಬಾರಿ ಕರೆ ಮಾಡಿ ನನ್ನೊಂದಿಗೆ ಮಾತನಾಡಿದ್ದಾರೆ ಎಂದರು.