ಹ್ಯೂಸ್ಟನ್​ನಲ್ಲಿ ಅಮೆರಿಕ ಅಧ್ಯಕ್ಷರ ಅಧಿಕೃತ ವೇದಿಕೆ ಬಳಸದ ಟ್ರಂಪ್: ಇದರ ಅರ್ಥ ಏನೆಂದು ಗೊತ್ತಾ?

ಹ್ಯೂಸ್ಟನ್: ಹೌಡಿ ಮೋದಿ ಕಾರ್ಯಕ್ರಮ ಅಚ್ಚರಿಯ ಘಟನೆಗೆ ಸಾಕ್ಷಿಯಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅಮೆರಿಕ ಅಧ್ಯಕ್ಷರು ಅಧಿಕೃತವಾಗಿ ಬಳಸುವ ಅಮೆರಿಕ ರಾಷ್ಟ್ರಧ್ವಜವಿರುವ ಅಧಿಕೃತ ವೇದಿಕೆಯನ್ನು ಬದಲಾಗಿ ಭಾರತ ಮತ್ತು ಅಮೆರಿಕದ ರಾಷ್ಟ್ರಧ್ವಜಗಳಿದ್ದ ವೇದಿಕೆಯಲ್ಲೇ ಭಾಷಣ ಮಾಡಿದರು.

ತುಂಬಾ ಸಮಯದ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್​ ಅಮೆರಿಕ ಅಧ್ಯಕ್ಷರ ಅಧಿಕೃತ ವೇದಿಕೆಯನ್ನು ಬಳಸದೆ, ಬೇರೊಂದು ವೇದಿಕೆಯಲ್ಲಿ ಭಾಷಣ ಮಾಡಿದರು. ಈ ವಿದ್ಯಮಾನ ಭಾರತ ಮತ್ತು ಅಮೆರಿಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಭಾರತ ಮತ್ತು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಮಹತ್ವವನ್ನು ಸಾರಲು ಟ್ರಂಪ್​ ಮಾಡಿದ ಪ್ರಯತ್ನವಿದು ಎಂದು ಇದನ್ನು ವಿಶ್ಲೇಷಿಸಲಾಗುತ್ತಿದೆ.

ಗಡಿ ಭದ್ರತೆ ಕುರಿತ ತನ್ನ ಕಾರ್ಯಸೂಚಿಯನ್ನು ವಿವರಿಸಿದ ಟ್ರಂಪ್​, ತಮ್ಮ ಈ ನಿರ್ಧಾರ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗೆ ತೊಂದರೆಯುಂಟು ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಡಲು ಸಕಲ ಪ್ರಯತ್ನಗಳನ್ನೂ ಮಾಡಿದರು. ತಮ್ಮ ಈ ಕಾರ್ಯಸೂಚಿ ಜಾರಿಗೆ ಬಂದರೆ ಇತರ ಅಮೆರಿಕನ್ನರಂತೆ ಪ್ರಗತಿಯ ಫಲಗಳು ಭಾರತೀಯರನ್ನು ಹೇಗೆ ತಲುಪಬಲ್ಲವು ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು.

ಕಾಶ್ಮೀರದ ಬಗ್ಗೆ ಪ್ರಸ್ತಾಪಿಸದ ಟ್ರಂಪ್​: ಕಾಶ್ಮೀರ ಸಮಸ್ಯೆ ಬಗೆಹರಿಸಲು ಭಾರತ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವುದಾಗಿ ಪದೇಪದೆ ಹೇಳುತ್ತಿದ್ದ ಟ್ರಂಪ್ ತಮ್ಮ ಭಾಷಣದಲ್ಲಿ ಕಾಶ್ಮೀರದ ಬಗ್ಗೆ ಚಕಾರ ಎತ್ತಲಿಲ್ಲ. ಆದರೆ ಅಮೆರಿಕದಂತೆ ತನ್ನ ಗಡಿಯನ್ನು ರಕ್ಷಿಸಿಕೊಳ್ಳಲು ಭಾರತಕ್ಕೂ ಹಕ್ಕಿದೆ ಎಂದಷ್ಟೇ ಪರೋಕ್ಷವಾಗಿ ಹೇಳಿದರು.

ಮೋದಿ ಕ್ರಿಯಾಶೀಲ ವ್ಯಕ್ತಿ: ಪ್ರಧಾನಿ ನರೇಂದ್ರ ಮೋದಿ ಮೇಲೆ ಮೆಚ್ಚುಗೆಯ ಹೂಮಳೆಯನ್ನೇ ಸುರಿಸಿದ ಟ್ರಂಪ್, ಮೋದಿ ಶ್ರೇಷ್ಠ ವ್ಯಕ್ತಿ. ಅವರು ನನ್ನ ಸ್ನೇಹಿತರು. ಸದಾ ಕ್ರಿಯಾಶೀಲರಾಗಿರುವ ಮೋದಿ 30 ಕೋಟಿ ಭಾರತೀಯರನ್ನು ಬಡತನದಿಂದ ಮೇಲೆತ್ತಿದ್ದಾರೆ. ಭಾರತ ಒಂದು ದೇಶವಲ್ಲ, ಅದು ಅತ್ಯಂತ ಮಹತ್ವದ ಸ್ನೇಹರಾಷ್ಟ್ರ ಎಂದು ಹೇಳುವ ಮೂಲಕ ಜಾಗತಿಕವಾಗಿ ಭಾರತದ ಮಹತ್ವವನ್ನು ವರ್ಣಿಸಲು ಯತ್ನಿಸಿದರು.

Leave a Reply

Your email address will not be published. Required fields are marked *