ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ 2024ನೇ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಫ್ಲೊರಿಡಾದ ಗಾಲ್ಫ್ ಕ್ಲಬ್ನಲ್ಲಿ ಗಾಲ್ಫ್ ಆಡುವಾಗ ಗುಂಡಿನ ದಾಳಿ ನಡೆದಿದ್ದು, ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಟ್ರಂಪ್ ಅವರನ್ನು ರಕ್ಷಣೆ ಮಾಡಿರುವುದಾಗಿ ಯುಎಸ್ ಸೀಕ್ರೆಟ್ ಸರ್ವೀಸ್ ತಿಳಿಸಿದೆ.
ಟ್ರಂಪ್ ಹತ್ಯೆಗೆ ಯತ್ನಿಸಿದ ಘಟನೆಯ ಕುರಿತು ದಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ತನಿಖೆ ಆರಂಭಿಸಿದೆ. ಭಾನುವಾರ ಮಧ್ಯಾಹ್ನ 2 ಗಂಟೆ (ಭಾರತೀಯ ಕಾಲಮಾನ ಪ್ರಕಾರ ರಾತ್ರಿ 11.30) ಸುಮಾರಿಗೆ ಗಾಲ್ಫ್ ಕ್ಲಬ್ ಬಳಿ ಗುಂಡಿನ ದಾಳಿ ನಡೆಸಿದ ಓರ್ವ ವ್ಯಕ್ತಿಯನ್ನು ಸೀಕ್ರೆಟ್ ಸರ್ವೀಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯು ದಾಳಿಯ ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಆದರೆ, ತದನಂತರದಲ್ಲಿ ಆತನನ್ನು ಬಂಧಿಸಲಾಗಿದ್ದು, ಶಂಕಿತ ಆರೋಪಿಯನ್ನು 58 ವರ್ಷದ ರಯಾನ್ ವೆಸ್ಲಿ ರೌತ್ ಎಂದು ಗುರುತಿಸಲಾಗಿದೆ.
ಟ್ರಂಪ್ ಹತ್ಯೆಯ ಯತ್ನದ ಹಿಂದಿರುವ ಆರೋಪಿಯ ಉದ್ದೇಶ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಈ ಘಟನೆಯ ಬೆನ್ನಲ್ಲೇ ಟ್ರಂಪ್ ಅವರು ತಮ್ಮ ಬೆಂಬಲಿಗರಿಗೆ ಇಮೇಲ್ ಮೂಲಕ ಸಂದೇಶವನ್ನು ರವಾನಿಸಿದ್ದು, ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ನಾನು ಎಂದಿಗೂ ಶರಣಾಗುವುದಿಲ್ಲ ಎಂದು ಎದುರಾಳಿಗಳಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ಕ್ಲಬ್‌ನ ಹೊರಗೆ ಗುಂಡಿನ ದಾಳಿ ನಡೆದಾಗ ಟ್ರಂಪ್ ಗಾಲ್ಫ್ ಆಡುತ್ತಿದ್ದರು ಎಂದು ವರದಿಯಾಗಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಟ್ರಂಪ್ ಅವರನ್ನು ಕ್ಲಬ್‌ನಲ್ಲಿರುವ ಹೋಲ್ಡಿಂಗ್ ರೂಮ್‌ಗೆ ಕರೆದೊಯ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಅಧಿಕಾರಿಗಳ ಪ್ರಕಾರ, ಬಂದೂಕುಧಾರಿಯು ಟ್ರಂಪ್‌ನಿಂದ ಸುಮಾರು 300-500 ಗಜಗಳಷ್ಟು (275-450 ಮೀಟರ್) ದೂರದಲ್ಲಿದ್ದನು.
ಶಂಕಿತ ಆರೋಪಿಯ ಬಳಿ AK-47-ಶೈಲಿಯ ರೈಫಲ್ ಇತ್ತು. ಅಲ್ಲದೆ, ಅವನ ಬಳಿ GoPro ಕೂಡ ಇತ್ತು. ಆರೋಪಿ ಕನಿಷ್ಠ ನಾಲ್ಕು ಗುಂಡುಗಳನ್ನು ಹಾರಿಸಿದ್ದಾನೆ. ಇದಕ್ಕೆ ಪ್ರತ್ಯುತ್ತರವಾಗಿ ಅಧಿಕಾರಿಗಳು ಗುಂಡು ಹಾರಿಸುತ್ತಿದ್ದಂತೆ ಬಂದೂಕುಧಾರಿ ತನ್ನ ರೈಫಲ್ ಮತ್ತು ಇತರ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಕಾರಿನಲ್ಲಿ ಪರಾರಿಯಾದನು. ಆದರೆ, ಅಲ್ಲಿಯೇ ಇದ್ದ ಸ್ಥಳೀಯರೊಬ್ಬರು ಆರೋಪಿಯ ಕಾರು ಮತ್ತು ನಂಬರ್ ಪ್ಲೇಟ್ ಫೋಟೋಗಳನ್ನು ತೆಗೆದುಕೊಂಡಿದ್ದರು. ಈ ಮಾಹಿತಿಯನ್ನು ಆಧರಿಸಿ ಕೆಲವೇ ಕ್ಷಣಗಳಲ್ಲಿ ಹತ್ತಿರದ ಮಾರ್ಟಿನ್ ಕೌಂಟಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ಗುಂಡಿನ ದಾಳಿಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ಸೀಕ್ರೆಟ್ ಸರ್ವೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ಟ್ರಂಪ್ ಸುರಕ್ಷಿತವಾಗಿರುವುದನ್ನು ಮನಗಂಡು ನಿರಾಳರಾಗಿದ್ದಾರೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. ಟ್ರಂಪ್ ಮೇಲಿನ ಎರಡನೇ ಹತ್ಯೆಯ ಯತ್ನದ ಬಗ್ಗೆ ಪ್ರತಿಕ್ರಿಯಿಸಿದ ಬೈಡೆನ್, ಯುನೈಟೆಡ್ ಸ್ಟೇಟ್ಸ್ನಲ್ಲಿ ಯಾವುದೇ ರೀತಿಯ ಹಿಂಸಾಚಾರಕ್ಕೆ ಸ್ಥಳವಿಲ್ಲ ಎಂದಿದ್ದಾರೆ. ಅಲ್ಲದೆ, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
I am relieved that the former President is unharmed.
There is an active investigation into this incident as law enforcement gathers more details about what happened.
— President Biden (@POTUS) September 16, 2024
ನಿಮ್ಮ ಅಂಗೈನಲ್ಲಿ ಈ ರೀತಿ ತ್ರಿಕೋನ ಚಿಹ್ನೆ ಇದೆಯಾ? ಇದ್ರೆ ಏನಾಗುತ್ತೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…
ಮುಂದಿನ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡ್ತೀರಾ? ಕೊನೆಗೂ ಮೌನ ಮುರಿದ ಕೆ.ಎಲ್. ರಾಹುಲ್