ಟ್ರಂಪ್​ಗೆ ಬಲ ನೀಡದ ಮಧ್ಯಂತರ ಚುನಾವಣೆ

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್​ನ (ಸಂಸತ್) ಮೇಲ್ಮನೆ ಸೆನೆಟ್​ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಬಹುಮತ ಉಳಿಸಿಕೊಂಡಿದೆ. ಆದರೆ, ಕೆಳಮನೆ ಹೌಸ್ ಆಫ್ ರೆಪ್ರಿಸೆಂಟೇಟಿವ್ಸ್ ನಲ್ಲಿ ರಿಪಬ್ಲಿಕನ್ ಪಕ್ಷ ಬಹುಮತ ಕಳೆದುಕೊಂಡಿದೆ. ಡೆಮಾಕ್ರಟಿಕ್ ಪಕ್ಷ ಸರಳ ಬಹುಮತ ಸಾಧಿಸಿದೆ. ಇದರಿಂದ ಟ್ರಂಪ್ ಅಧಿಕಾರಕ್ಕೆ ಕಂಟಕವಿಲ್ಲದಿದ್ದರೂ, ಮಹತ್ವದ ಕಾಯ್ದೆಗಳಿಗೆ ಅಂಗೀಕಾರ ಪಡೆಯಲು ಕಷ್ಟವಾಗಲಿದೆ.

ಅಮೆರಿಕದ ಅಧ್ಯಕ್ಷರನ್ನು ಜನರೇ ನೇರವಾಗಿ ಆಯ್ಕೆ ಮಾಡುತ್ತಾರೆ. ಅವರ ಪದಚ್ಯುತಿಗೆ ಕ್ಲಿಷ್ಟ ನಿಯಮಗಳಿವೆ. ಡೆಮಾಕ್ರಟಿಕ್ ಪಕ್ಷ ಕೆಳಮನೆಯಲ್ಲಿ ಮಹಾಭಿಯೋಗ ಮಂಡಿಸಿ ಅನುಮೋದಿಸಿದರೂ, ಸೆನೆಟ್​ನಲ್ಲಿ ಈ ಗೊತ್ತುವಳಿ ಬಿದ್ದುಹೋಗುತ್ತದೆ. ಮೇಲ್ಮನೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಸರಳ ಬಹುಮತ ಇದೆ.

ಹಿಗ್ಗದ ಎನ್​ಆರ್​ಐ ಸಂಖ್ಯೆ: ಮಧ್ಯಂತರ ಚುನಾವಣೆಯಲ್ಲಿ ಅಮೆರಿಕದ ಕಾಂಗ್ರೆಸ್​ನಲ್ಲಿ ಭಾರತೀಯ ಮೂಲದವರ ಸಂಖ್ಯೆ ಏರಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಆದರೆ, ರಾಜ್ಯದ ಶಾಸನಸಭೆಗಳಿಗೆ ಅನಿವಾಸಿ ಭಾರತೀಯರು ಗಮನಾರ್ಹ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಹೌಸ್ ಆಫ್ ರೆಪ್ರಿಸೆಂಟಟಿವ್ಸ್ ಸದಸ್ಯರಾದ ಅಮಿ ಬೆರಾ, ಪ್ರಮೀಳಾ ಜಯಪಾಲ್, ರಾಜಾ ಕೃಷ್ಣಮೂರ್ತಿ, ರೋ ಖನ್ನಾ ಮತ್ತು ಸೆನೆಟ್​ನ ಸದಸ್ಯೆ ಕಮಲಾ ಹ್ಯಾರಿಸ್ ತಮ್ಮ ಸ್ಥಾನ ಖಚಿತ ಪಡಿಸಿಕೊಂಡಿದ್ದಾರೆ. ಆದರೆ, ಈ ಐವರ ಹೊರತಾಗಿ ಕಣದಲ್ಲಿದ್ದ ಒಂದು 12 ಭಾರತೀಯ ಮೂಲದವರು ಸೋತಿದ್ದಾರೆ. ಹೀಗಾಗಿ ‘ಸಮೋಸಾ ಕಾಕಸ್’ ಹಿಗ್ಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಗೆದ್ದ ಭಾರತೀಯ ಮೂಲದವರು

ಷಿಕಾಗೊದಲ್ಲಿ ಜನಿಸಿದ ರಾಮ್ ವಿಲ್ಲಿವಲಂ ಇಲಿನಾಯ್್ಸ ಸೆನೆಟ್​ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಇಲಿನಾಯ್್ಸ ಶಾಸನ ಸಭೆ ಪ್ರವೇಶಿಸಿದ ದಕ್ಷಿಣ ಏಷ್ಯಾ ಮೂಲದ ಮೊದಲ ಅಮೆರಿಕನ್ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ. ಇಸ್ಲಾಂ ಧರ್ವಿುಯ ಭಾರತ ಮೂಲದವರಾದ ಮುಜ್ತಾಬಾ ಮೊಹಮ್ಮದ್ ಉತ್ತರ ಕರೋಲಿನಾ ಸೆನೆಟ್​ಗೆ ಗೆಲುವು ಸಾಧಿಸಿದ್ದಾರೆ. ಕೆಂಟುಕಿ ರಾಜ್ಯದ ಅಸೆಂಬ್ಲಿಗೆ ನೀಮಾ ಕುಲಕರ್ಣಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಜಯ್ ಚೌಧರಿ ಉತ್ತರ ಕರೋಲಿನಾ ಸೆನೆಟ್​ಗೆ ಪುನರ್ ಆಯ್ಕೆಯಾದರೆ, ನೀರಜ್ ಅಟಾನಿ ಓಹಿಯೊ ಅಸೆಂಬ್ಲಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ವಾಷಿಂಗ್ಟನ್ ಶಾಸನಸಭೆಗೆ ಮಂಕಾ ಧಿಂಗ್ರಾ ಮತ್ತು ವಂದನಾ ಸ್ಲೇಟರ್ ಮರು ಆಯ್ಕೆಯಾಗಿದ್ದಾರೆ. ಕ್ಯಾಲಿಫೋನಿರ್ಯಾದ ಅಸೆಂಬ್ಲಿಗೆ ಸಬಿ ಕುಮಾರ್ ಪುನರ್​ಆಯ್ಕೆ ಆಗಿದ್ದಾರೆ.