ಮತ್ತಿಕೆರೆ ಪೋಸ್ಟ್‌ಮನ್‌ನಿಂದ ಕರ್ತವ್ಯ ನಿರ್ಲಕ್ಷ್ಯ ಆರೋಪ
ಮಾಗಡಿ : ಮತ್ತಿಕೆರೆ ಅಂಚೆ ಕಚೇರಿಯ ಪೋಸ್ಟ್‌ಮನ್ ನಾಗರಿಕರಿಗೆ ಸರಿಯಾಗಿ ಪತ್ರಗಳು ಹಾಗೂ ಇನ್ನಿತರ ದಾಖಲೆಗಳನ್ನು ತಲುಪಿಸದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ರಾಜ್ಯ ಅಧ್ಯಕ್ಷ ರಾಕೇಶ್ ಆರೋಪಿಸಿದರು.
ತಾಲೂಕಿನ ಮತ್ತಿಕೆರೆ ಅಂಚೆ ಕಚೇರಿ ಬಳಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಬೆಂಗಳೂರಿನಿಂದ ಡಿ.24 ರಂದು ಆರ್‌ಸಿ ಕಾರ್ಡ್ ಬಂದಿದೆ. ಈ ಕಾರ್ಡ್‌ಅನ್ನು ಗಟ್ಟಿಪುರಕ್ಕೆ ತಲುಪಿಸಿಲ್ಲ. ಆದರೂ ತಲುಪಿಸಲಾಗಿದೆ ಎಂದು ಮೊಬೈಲ್‌ಗೆ ಮೆಸೆಜ್ ಬಂದಿದೆ. ಜ.13 ಕಳೆದರೂ ಅಂಚೆ ಕಚೇರಿಯಿಂದ ಆರ್‌ಸಿ ಕಾರ್ಡ್ ಬಂದಿಲ್ಲ. ಈ ಬಗ್ಗೆ ಅಂಚೆ ಕಚೇರಿಯ ಅಧಿಕಾರಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಬೇರೆ ನಂಬರ್‌ನಿಂದ ಕರೆ ಮಾಡಿದ ವೇಳೆ ಡಿ.27 ರಂದು ತಲುಪಿಸುವುದಾಗಿ ತಿಳಿಸಿದರು. ಡಿ.28 ರಂದು ಆರ್‌ಸಿ ಕಾರ್ಡ್ ನೀಡಲಾಗಿದೆ ಎಂದು ಮೆಸೇಜ್ ಬಂದಿದೆ. ಆದರೆ, ಇನ್ನೂ ತಲುಪಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಮೇಲ್ ಮೂಲಕ ಮೇಲಧಿಕಾರಿಗೆ ದೂರು ನೀಡಲಾಗಿದೆ. ಆದರೂ, ಸಂಬಂಧಪಟ್ಟವರು ಕ್ರಮಕೈಗೊಳ್ಳದೆ ನಾಗರಿಕರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಹೋರಾಟ ನಡೆಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಸಾಮಾಜಿಕ ಜಾಲತಾಣ ರಾಜ್ಯ ಸಂಯೋಜಕ ಜಿ.ಆರ್.ಮಧು ಮಾತನಾಡಿ, ಮತ್ತಿಕೆರೆ ಅಂಚೆ ಕಚೇರಿಗೆ ಬರುವ ದಾಖಲಾತಿಗಳನ್ನು ಸಂಬಂಧಪಟ್ಟವರಿಗೆ ಸರಿಯಾಗಿ ನೀಡುತ್ತಿಲ್ಲ. ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಸರ್ಕಾರಿ ಇಲಾಖೆ, ಖಾಸಗಿ ಫ್ಯಾಕ್ಟರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಬಹುತೇಕ ಮಂದಿಗೆ ಉದ್ಯೋಗ ನೇಮಕಾತಿಗೆ ಸಂದರ್ಶನಕ್ಕೆ ಪತ್ರ ಬಂದರೂ ನೀಡುತ್ತಿಲ್ಲ. ವೃದ್ಧಾಪ್ಯವೇತನ, ಅಂಗವಿಕಲರ ವೇತನ, ಪಿಂಚಣಿಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಈ ಹಣ ನೀಡಲು ಕಮಿಷನ್ ಪಡೆಯುತ್ತಿದ್ದಾರೆ ಎಂದು ದೂರಿದರು.
ಮುಖಂಡರಾದ ಜಿ.ವಿ. ಶಿವರಾಜು, ಚಿಕ್ಕವೀರ ಒಡೆಯರ್, ಗಂಗಾಧರ್, ರಾಜು, ಗೋಪಾಲ್, ವಿನೋದ್, ಕುಮಾರ್, ಬಸವರಾಜ್, ಕೊಟಗಾರಹಳ್ಳಿ ರವಿಕುಮಾರ್ ಇತರರು ಇದ್ದರು.