ನಾಡದೋಣಿ ಮೀನುಗಾರಿಕೆಗೆ ಸಜ್ಜು

ಉಡುಪಿ: ಮಳೆಗಾಲದಲ್ಲಿ ಸಹಕಾರಿ ತತ್ವದಡಿ ನಡೆಯುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಸಲು ಮಲ್ಪೆ ನಾಡದೋಣಿ ಮೀನುಗಾರರು ಸಜ್ಜಾಗುತ್ತಿದ್ದಾರೆ. ಪಶ್ಚಿಮ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಗಾಳಿ ಮಳೆ ಆರಂಭವಾಗಿದೆ, ಜೂನ್ 22, 23ರ ಬಳಿಕ ಮೀನುಗಾರರು ಕಡಲಿಗಿಳಿಯುವ ಸಾಧ್ಯತೆ ಇದೆ.

ಯಾಂತ್ರೀಕೃತ ಮೀನುಗಾರಿಕೆ ಮುಗಿದ ನಂತರ ಎರಡು ತಿಂಗಳು ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಮೀನುಗಾರಿಕೆಗೆ ಎಲ್ಲ ರೀತಿಯ ತಯಾರಿಗಳು ಭರದಿಂದ ಸಾಗುತ್ತಿದೆ. ಮೀನುಗಾರರಿಂದ ದಾರದ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ವರ್ಷ ಮಳೆಗಾಲದಲ್ಲಿ ಮೀನುಗಾರಿಕೆ ಋತು ಕೊನೆಗೊಂಡ ಬಳಿಕ ಮೀನುಗಾರಿಕೆಗೆ ಬಳಸಿದ ಬಲೆಗಳನ್ನು ಬಿಡಿಸಿ ಸಂಗ್ರಹಿಸಿಡುತ್ತಾರೆ. ಪ್ರಸ್ತುತ ಋತುವಿನಲ್ಲಿ ಮಳೆಗಾಲ ಆರಂಭಗೊಂಡ ಬಳಿಕ ನಿಗದಿಪಡಿಸಿದ ದಿನದಂದು ಬಲೆಗಳನ್ನು ಸಾಮೂಹಿಕವಾಗಿ ಪೋಣಿಸುವ ಪ್ರಕ್ರಿಯೆ ನಡೆಯುತ್ತದೆ. ಕರಾವಳಿಯ ಮೀನುಗಾರರ ಭಾಷೆಯಲ್ಲಿ ಇದಕ್ಕೆ ದಾರ ಎನ್ನಲಾಗುತ್ತದೆ.

38 ಡಿಸ್ಕೊ ಫಂಡ್: ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಅಧೀನದಲ್ಲಿ 38 ಡಿಸ್ಕೊ ಫಂಡ್‌ಗಳಿವೆ(ನಾಡದೋಣಿ ಮೀನುಗಾರರ ತಂಡಗಳು). ಒಂದು ಗುಂಪಿನಲ್ಲಿ 30ರಿಂದ 60 ಮಂದಿ ಮೀನುಗಾರಿಕೆ ಮಾಡುತ್ತಾರೆ. ಗುಂಪಿನಲ್ಲಿ ಮಾಲೀಕ – ಕಾರ್ಮಿಕ ಎಂಬ ವಿಭಾಗವಿಲ್ಲ, ಖರ್ಚು ಮತ್ತು ಆದಾಯ ಎಲ್ಲರಿಗೂ ಸಮನಾಗಿ ಹಂಚಿಕೆಯಾಗುತ್ತದೆ. ದೇವರ ಮೇಲೆ ಹೆಚ್ಚು ನಂಬಿಕೆ ಇಟ್ಟು ಜೀವನ ಸಾಗಿಸುವವರು ನಾಡದೋಣಿ ಮೀನುಗಾರರು. ಪ್ರತಿಯೊಂದು ಹಂತದಲ್ಲೂ ಒಳ್ಳೆಯ ಘಳಿಗೆ ನೋಡಿ ಕೆಲಸ ಆರಂಭಿಸುವುದು ಇವರ ಸಂಪ್ರದಾಯ. ಶುಭ ಮುಹೂರ್ತದಲ್ಲಿ ಕೆಲಸ ಆರಂಭಿಸಿದರೆ ಉತ್ತಮ ಮತ್ಸೃಸಂಪತ್ತು ಸಿಗಲಿದೆ ಎಂಬ ನಂಬಿಕೆ ಮೀನುಗಾರರಲ್ಲಿದೆ.

ಸಿಗಡಿ ದೊರೆತರೆ ಲಾಭದಾಯಕ: ತೂಫಾನ್ ಬಂದರೆ, ಸಮುದ್ರ ಪ್ರಕ್ಷುಬ್ಧಗೊಂಡು ಗುಡ್ಡಗಾಡುಗಳಿಂದ ನೆರೆನೀರು ಸಮುದ್ರ ಸೇರುತ್ತದೆ. ಆಗ ಸಮುದ್ರದ ಕೆಸರು ಮೇಲೆ ಬರುತ್ತದೆ, ಪರಿಣಾಮ ಮೀನುಗಳು ದಡದತ್ತ ಸೇರುತ್ತವೆ. ಅದನ್ನು ಹಿಡಿಯಲು ಸಮುದ್ರ ಶಾಂತವಾಗಬೇಕು. ಆಗ ಬಂಗುಡೆ, ಸಿಗಡಿಯಂತಹ ಮೀನುಗಳು ಹೇರಳವಾಗಿ ನಾಡದೋಣಿ ಬಲೆಗೆ ಸಿಗುತ್ತದೆ. ನಾಡದೋಣಿ ಮೀನುಗಾರರಿಗೆ ಹೆಚ್ಚಾಗಿ ಲಭಿಸುವುದು ಬೂತಾಯಿ, ಬಂಗುಡೆ, ಮಣಂಗ್ ಮೀನುಗಳು. ಇದರಲ್ಲಿ ಆದಾಯಕ್ಕಿಂತ ಖರ್ಚುವೆಚ್ಚಗಳಿಗೆ ಸಮನಾಗುತ್ತದೆ. ಸಿಗಡಿ ಮೀನು ಹೆಚ್ಚು ದೊರೆತರೆ ನಾಡದೋಣಿ ಮೀನುಗಾರರಿಗೆ ಲಾಭದಾಯಕ ಮೀನುಗಾರಿಕೆ ಎನ್ನುತ್ತಾರೆ ಮೀನುಗಾರರು.

ದ.ಕ. ಜಿಲ್ಲೆಯಲ್ಲೂ ಸಿದ್ಧತೆ:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಡ ದೋಣಿ ಮೀನುಗಾರಿಕೆಗೆ ಸಿದ್ಧರಾಗಿದ್ದು, ಸಮುದ್ರ ಪ್ರಕ್ಷುಬ್ದಗೊಂಡಿರುವುದರಿಂದ ವಿಳಂಬವಾಗಿದೆ. ಸಮುದ್ರ ಸಹಜ ಸ್ಥಿತಿಗೆ ಮರಳಿದ ತಕ್ಷಣ ನಾಡ ದೋಣಿ ಮೀನುಗಾರಿಕೆ ಆರಂಭಗೊಳ್ಳಲಿದೆ.
ಜಿಲ್ಲೆಯಲ್ಲಿ ಸುಮಾರು 1200 ನಾಡ ದೋಣಿಗಳಿವೆ. ಬಲೆ ತಯಾರಿ, ದೋಣಿ ರಿಪೇರಿ ಕೆಲಸಗಳು ಪೂರ್ಣಗೊಂಡಿವೆ. ಮೀನುಗಾರರು ಸಜ್ಜಾಗಿ ನಿಂತಿದ್ದಾರೆ. ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಂಡು ಮೀನು ದರ ಗಗನಕ್ಕೇರಿದ್ದು, ನಾಡ ದೋಣಿಯ ಮೀನು ಮಾರುಕಟ್ಟೆಗೆ ಬರುವ ತನಕ ಮೀನು ದುಬಾರಿಯಾಗಿದೆ.

ಸೀಮೆ ಎಣ್ಣೆ ಸಿಕ್ಕಿಲ್ಲ: ಸರ್ಕಾರದಿಂದ ಸಿಗುವ ಸಬ್ಸಿಡಿ ಸೀಮೆಎಣ್ಣೆ ಕಳೆದ ಎರಡು ತಿಂಗಳಿನಿಂದ ಎಲ್ಲ ನಾಡ ದೋಣಿ ಮೀನುಗಾರರಿಗೆ ಸಿಕ್ಕಿಲ್ಲ. 5-6 ಟ್ರಿಪ್‌ಗೆ ಹೋಗುವಷ್ಟು ಮಾತ್ರ ಸೀಮೆಎಣ್ಣೆ ಇದೆ. ಏಪ್ರಿಲ್‌ನಲ್ಲಿ ಪೂರೈಕೆಯಾಗಿರಲಿಲ್ಲ. ಅದನ್ನು ಮೇ ತಿಂಗಳಲ್ಲಿ ಕೊಟ್ಟಿದ್ದಾರೆ. ಮುಕ್ಕಾಲು ಭಾಗದಷ್ಟು ಮೀನುಗಾರರಿಗೆ ಸೀಮೆಎಣ್ಣೆ ಸಿಕ್ಕಿಲ್ಲ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಗಿಲ್‌ನೆಟ್ ಮೀನುಗಾರರ ಸಂಘದ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್ ಒತ್ತಾಯಿಸಿದ್ದಾರೆ.

ನಾಡದೋಣಿ ಮೀನುಗಾರರಲ್ಲಿ ಮುಂದಿನ ದಿನಗಳಲ್ಲಿ ಸೀಮೆಎಣ್ಣೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಇದೆ, ಇದನ್ನು ಕೇಂದ್ರ, ರಾಜ್ಯ ಸರ್ಕಾರಗಳು ದೂರವಾಗಿಸಬೇಕು. ಕರ ರಹಿತ ಸೀಮೆಎಣ್ಣೆ ಇದ್ದಲ್ಲಿ ಮಾತ್ರ ನಾಡದೋಣಿ ಮೀನುಗಾರಿಕೆ ಉಳಿಯಲು ಸಾಧ್ಯ. ಕಳೆದ ವರ್ಷ ಆರಂಭದಲ್ಲಿ ನಾಡದೋಣಿಗೆ ಉತ್ತಮ ಮೀನುಗಾರಿಕೆಯಾಗಿಲ್ಲ, ಕೊನೆಯ 10 ದಿನಗಳಲ್ಲಿ ಮೀನುಗಾರಿಕೆ ಉತ್ತಮವಾಗಿತ್ತು. ಈ ಬಾರಿ ಉತ್ತಮ ನಿರೀಕ್ಷೆ ಹೊಂದಿದ್ದೇವೆ. ಕಡಲಿನ ವಾತಾವರಣ ನೋಡಿಕೊಂಡು ಮೀನುಗಾರಿಕೆ ಇಳಿಯಲಿದ್ದೇವೆ.
– ಕೃಷ್ಣ ಎಸ್. ಸುವರ್ಣ, ನಾಡದೋಣಿ ಮೀನುಗಾರ, ಪಡುತೋನ್ಸೆ ಬೇಂಗ್ರೆ

Leave a Reply

Your email address will not be published. Required fields are marked *