ಮೂಗೂರು: ಇತಿಹಾಸ ಪ್ರಸಿದ್ಧ ಇಲ್ಲಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಜ.13ರಿಂದ 17ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಜ.15ರಂದು ಮಹಾ ರಥೋತ್ಸವದ ಮೂಲಕ ಅಧಿಕೃತವಾಗಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಈಗಾಗಲೇ ಗ್ರಾಮದಲ್ಲಿ ಸಡಗರ ಮತ್ತು ಸಂಭ್ರಮ ಕಳೆಗಟ್ಟಿದೆ.
ಅದ್ದೂರಿ ಜಾತ್ರಾಮಹೋತ್ಸವಕ್ಕೆ ಈಗಾಗಲೇ ಪೂರ್ವಸಿದ್ಧತಾ ಸಭೆ ನಡೆಸಲಾಗಿದ್ದು, ಅಮ್ಮನವರ ಜಾತ್ರೋತ್ಸವವನ್ನು ಕಣ್ತುಂಬಿಸಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ರಾಜ್ಯದ ಭಾಗಗಳಿಂದ ಅಪಾರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಇದಕ್ಕಾಗಿ ಸಕಲ ಸಿದ್ಧತೆಗೆ ಅಣಿಯಾಗುತ್ತಿದೆ. ತಿಬ್ಬಾದೇವಿ ರಥೋತ್ಸವಕ್ಕೂ ಮುನ್ನ ಒಂದು ವಾರ ಮೊದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ.
ಜ.3 ರಂದು ಅಂಕುರಾರ್ಪಣ ಮೂಲಕ ಜಾತ್ರಾ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಜ 10 ರಂದು ವಧೆ ಉತ್ಸವ, ರಾತ್ರಿ ಕಣಿಯರ ಮಂಟಪದಲ್ಲಿ ಪೂಜೆ ಉತ್ಸವ, 11ರಂದು ಶೇಷ, ಪಕ್ಷಿ ವಾಹನೋತ್ಸವ, 12ರಂದು ಸಿಂಹ ವಾಹನೋತ್ಸವ ಹಾಗೂ ಚಂದ್ರ ಮಂಡಲ ಉತ್ಸವ, 13ರಂದು (ಮೂಗೂರು ಬಂಡಿ )ರುದ್ರಾಕ್ಷಿ ಮಂಟಪದ ಉತ್ಸವ, 14ರಂದು ಹೂವಿನ ಪಲ್ಲಕ್ಕಿಯಲ್ಲಿ ತೆಪ್ಪೋತ್ಸವ,15 ರಂದು ಅಮ್ಮನವರ ಮಹಾ ರಥೋತ್ಸವ ನಂತರ ರಾತ್ರಿ ಆನೆ ವಾಹನೋತ್ಸವ, 16 ರಂದು ಹೊಸಹಳ್ಳಿಯಲ್ಲಿ ಚಿಗುರು ಕಡಿಯುವುದು ನಂತರ ಮೂಗೂರಿಲ್ಲಿ ಕುದುರೆ ಹಾಗೂ ಮಂಟಪ ಉಯ್ಯಲೆ ಉತ್ಸವ ನೆರವೇರಲಿದೆ. 17ರಂದು ಅಳು ಪಲ್ಲಕ್ಕಿಯಲ್ಲಿ ವೈಮಾಳಿಗೆ ಉತ್ಸವ, ರಾತ್ರಿ ದೇಗುಲದಲ್ಲಿ ಪೂರ್ಣಾಭಿಷೇಕ, ವಿಶೇಷ ಪೂಜೆ ಬಳಿಕ ಮಹಾ ಮಂಗಳಾರತಿಯೊಂದಿಗೆ ಧಾರ್ಮಿಕ ಆಚರಣೆಗೆ ತೆರೆ ಬೀಳಲಿದೆ.
ಈ ಬಾರಿ ತಿಬ್ಬಾದೇವಿ ಜಾತ್ರೆ ಸಂಕ್ರಾಂತಿ ಹಬ್ಬದಂದು ನಡೆಯಲಿದ್ದು, ಅಮ್ಮನವರ ಉತ್ಸವಗಳಿಗೆ ಮತ್ತಷ್ಟು ಮೆರುಗು ಬರಲಿದೆ. ಜಾತ್ರೆ ಗೆ ಆಗಮಿಸುವ ಭಕ್ತರಿಗೆ ಇದೊಂದು ಸೌಭಾಗ್ಯ ಎನ್ನಬಹುದು. ಅಲ್ಲದೆ ಜನತೆಗೆ ಮೂಲಸೌಕರ್ಯ ಒದಗಿಸುವ ಕೆಲಸವನ್ನು ಸಂಬಂಧಪಟ್ಟವರು ಮಾಡಬೇಕು.
ಗೌಡರ ಎಂ.ಪಿ.ಛಾಯಕುಮಾರ್ ಉದ್ಯಮಿ, ಮೂಗೂರು
ಫೋಟೋ 11ರಲ್ಲಿ ಇವೆ