ದೇವದುರ್ಗ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿ (ಕನಗನಹಳ್ಳಿ) ಫೆ.12ರಂದು ಐತಿಹಾಸಿಕ ಪವಿತ್ರ ತ್ರಿಪಿಟಕ ಪಠಣ ಮಹೋತ್ಸವ ಆಯೋಜಿಸಲಾಗಿದೆ ಎಂದು ಧಮ್ಮದೀಪ ಚಾಲನಾ ಸಮಿತಿ ತಾಲೂಕು ಸಂಚಾಲಕ ಮಲ್ಲೇಶಪ್ಪ ಹುನಗುಂದಬಾಡ ತಿಳಿಸಿದರು.
ಇದನ್ನೂ ಓದಿ: ಕತ್ತಲೆ ಹೊಡೆದೊಡಿಸಲು ಬೆಳಕು ಬೇಕು
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಮಹಾಬೋಧಿ ಸೊಸೈಟಿ, ಲೈಟ್‌ಆಫ್ ದಿ ಬುದ್ಧ ಧಮ್ಮ ಪ್ರತಿಷ್ಠಾನ, ಅಂತಾರಾಷ್ಟ್ರೀಯ ತ್ರಿಪಿಟಕ ಪರಿಷತ್ ಮತ್ತು ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ದೇಶ, ವಿದೇಶದ 108 ಬೌದ್ಧ ಬಿಕ್ಕುಗಳು ಭಾಗವಹಿಸಲಿದ್ದಾರೆ.
ಹಲವು ವರ್ಷಗಳ ನಂತರ ಪವಿತ್ರ ತ್ರಿಪಿಟಕ ಪಠಣ, ಬುದ್ಧನ ಬೋಧನೆಗಳನ್ನು ಪಾಲಿ ಭಾಷೆಯಲ್ಲಿ ಪಠಣ ಮಾಡಲಾಗುತ್ತಿದೆ. ಜಗತ್ತಿಗೆ ಶಾಂತಿ, ಸಹಬಾಳ್ವೆ, ಭ್ರಾತೃತ್ವ ಸಂದೇಶ ಸಾರಲಾಗುವುದು. ಅಂದು ಬೆಳಗ್ಗೆ 10ಗಂಟೆಗೆ ಮಹಾದ್ವಾರದಿಂದ ಬೌದ್ಧ ಮಹಾಸ್ತೂಪದವರೆಗೆ ಧಮ್ಮ ಜಾಥಾ ಆಯೋಜಿಸಲಾಗಿದೆ.
11ಗಂಟೆಗೆ ಸಂಘದಾನ ಬಿಕ್ಕುಗಳಿಗೆ ಆಹಾರ ದಾನ ಕಾರ್ಯಕ್ರಮ, ಮಧ್ಯಾಹ್ನ 12ಕ್ಕೆ ಮಹಾಭೋಜನ, ಮಧ್ಯಾಹ್ನ 12.30ರಿಂದ 3 ಗಂಟೆವರೆಗೆ ಪವಿತ್ರ ತ್ರಿಪಿಟಕ ಪಠಣ, 3ರಿಂದ 4ರವರೆಗೆ ಧಮ್ಮ ಪ್ರಚಾರ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಪ್ರಮುಖರಾದ ನರಸಪ್ಪ ಚಿಂಚೋಡಿ ವಕೀಲ, ಮಹಾಂತೇಶ ಭವಾನಿ, ಮಲ್ಲಿಕಾರ್ಜುನ ಮಸರಕಲ್, ತಮ್ಮಣ್ಣ ವಕೀಲ, ಬೊಮ್ಮನಾಳ, ರಾಮಣ್ಣ ಭವಾನಿ ಇದ್ದರು.