ಕೇಂದ್ರೀಯ ಭದ್ರತಾ ಸಿಬ್ಬಂದಿಯನ್ನು ಪೊರಕೆ ಹಿಡಿದು ಮತಗಟ್ಟೆಯಿಂದ ಹೊರದಬ್ಬಿ ಎಂದ ತೃಣಮೂಲ ಶಾಸಕಿ

ಕೋಲ್ಕತ : ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಅರೆಸೇನಾ ಪಡೆಗಳ ಭದ್ರತಾ ಸಿಬ್ಬಂದಿಯನ್ನು ಪಕ್ಷದ ಮಹಿಳಾ ಮೋರ್ಚಾದ ಕಾರ್ಯಕರ್ತರು ಪೊರಕೆ ಹಿಡಿದು ಮತಗಟ್ಟೆ ಪ್ರದೇಶದಿಂದ ಹೊರಗೆ ಕಳುಹಿಸಿ ಎಂದು ಟಿಎಂಸಿ ಶಾಸಕಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಟಿಎಂಸಿ ಶಾಸಕಿ ಚಕದ ರತ್ನಾ ಘೋಷ್​ ಕರ್​ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ನೀವು ಯುದ್ಧವನ್ನು ಗೆಲ್ಲಬೇಕು ಎಂದಿದ್ದರೆ ಅಲ್ಲಿ ನ್ಯಾಯೋಚಿತ ಮತ್ತು ಅನ್ಯಾಯವಾದುದು ಎಂಬುದಿಲ್ಲ. ನೀವು ಹೇಗಾದರೂ ಯುದ್ಧವನ್ನು ಗೆಲ್ಲಲೇ ಬೇಕು. 2016ರ ಚುನಾವಣೆಯಲ್ಲಿ ಕೇಂದ್ರೀಯ ಭದ್ರತಾ ಪಡೆಗಳ ಸಿಬ್ಬಂದಿ ನಮ್ಮ ಯುವಕರ ಮೇಲೆ ಲಾಠಿ ಚಾರ್ಚ್​ ಮಾಡಿದ್ದರು. ಅವರು ನಮ್ಮ ಯುವಕರ ರಕ್ತ ಹರಿಸಿದ್ದರು. ಆದರೆ, ಈಗ ಸವಾಲು ಇನ್ನೂ ದೊಡ್ಡದಾಗಿದೆ. ಆದರೆ, ಹೆದರಬೇಕಿಲ್ಲ. ನಮ್ಮ ಮಹಿಳಾ ಮೋರ್ಚಾದ ಕಾರ್ಯಕರ್ತರು ಪೊರಕೆ ಹಿಡಿದು ಮತಗಟ್ಟೆಗಳಲ್ಲಿ ನಿಯೋಜಿತರಾಗಿರುವ ಕೇಂದ್ರೀಯ ಭದ್ರತಾ ಪಡೆಗಳ ಸಿಬ್ಬಂದಿಯನ್ನು ಆ ಪ್ರದೇಶದಿಂದ ಹೊರಗೋಡಿಸಬೇಕು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಉಳಿದ ಹಂತದ ಮತದಾನಗಳಿಗೆ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಬೇಕು ಮತ್ತು ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.

ಅಮಿತ್​ ಷಾ ಖಂಡನೆ

ಟಿಎಂಸಿ ಶಾಸಕಿಯ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು ಖಂಡಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅಮಿತ್​ ಷಾ ‘ಅಂತಿಮವಾಗಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷ ಹಿಂಸೆ ಮತ್ತು ಅರಾಜಕತೆಯಲ್ಲಿ ನಂಬಿಕೆ ಇಟ್ಟಿದೆ ಎಂಬುದನ್ನು ಅವರ ಬೆಂಬಲಿಗರು ಒಪ್ಪಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಮತದಾರರು ಟಿಎಂಸಿಯನ್ನು ಸೋಲಿಸಲಿದ್ದಾರೆ. ಅದಕ್ಕೆ ಸಮಯ ಕೂಡಿ ಬಂದಿದೆ’ ಎಂದು ತಿಳಿಸಿದ್ದಾರೆ.