ಕೋಲ್ಕತದಲ್ಲಿ ನಡೆದ ಹಿಂಸಾಚಾರಕ್ಕೆ ತೃಣಮೂಲ ಕಾಂಗ್ರೆಸ್​ ಕಾರಣ: ಅಮಿತ್​ ಷಾ

ನವದೆಹಲಿ: ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ರೋಡ್​ ಶೋ ವೇಳೆ ನಡೆದ ಹಿಂಸಾಚಾರದ ಹಿಂದೆ ತೃಣಮೂಲ ಕಾಂಗ್ರೆಸ್​ ಕೈವಾಡವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮಿತ್​ ಷಾ ಅವರು ಲೋಕಸಭೆ ಚುನಾವಣೆಯ 6 ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಆದರೆ ದೇಶದ ಯಾವುದೇ ಭಾಗದಲ್ಲಿ ಮತದಾನದ ವೇಳೆ ಹಿಂಸಾಚಾರ ಪ್ರಕರಣಗಳು ನಡೆದಿಲ್ಲ. ಬಿಜೆಪಿ ಎಲ್ಲಾ ರಾಜ್ಯಗಳಲ್ಲೂ 400 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ನಿಮ್ಮಂತೆ ಕೇವಲ 42 ಸೀಟುಗಳಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಟಿಎಂಸಿ ವಿರುದ್ಧ ಅಮಿತ್​ ಷಾ ಕಿಡಿ ಕಾರಿದರು.

ಟಿಎಂಸಿ ಕಾರ್ಯಕರ್ತರು ಚಿಂತಕ ಈಶ್ವರಚಂದ್ರ ವಿದ್ಯಾಸಾಗರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು, ಇದರ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜನರಿಗೆ ಎಲ್ಲವೂ ಗೊತ್ತಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಂತ್ಯಕಾಲ ಸಮೀಪಿಸುತ್ತಿದೆ. ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಷಾ ಆರೋಪ ಮಾಡಿದರು.

ಸ್ಥಳದಲ್ಲಿ ಭದ್ರತೆಗಾಗಿ ನಿಯೋಜಿತರಾಗಿದ್ದ ಸಿಆರ್​ಪಿಎಫ್​ ಯೋಧರ ನೆರವಿನಿಂದ ನಾನು ಅಲ್ಲಿಂದ ಪಾರಾಗಿ ಬಂದಿದ್ದೇನೆ. ಅವರಿಲ್ಲದಿದ್ದರೆ ಯಾವುದೇ ಗಾಯಗಳಿಲ್ಲದೆ ಅಲ್ಲಿಂದ ಸುರಕ್ಷಿತವಾಗಿ ಮರಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಮಿತ್​ ಷಾ ತಿಳಿಸಿದ್ದಾರೆ.

ಮಂಗಳವಾರ ಅಮಿತ್​ ಷಾ ಅವರ ರೋಡ್ ಶೋ ಕೋಲ್ಕತ ವಿವಿ ಬರುತ್ತಿದ್ದಂತೆ ತೃಣಮೂಲ ವಿದ್ಯಾರ್ಥಿ ಪರಿಷದ್ ಸದಸ್ಯರು ಕಪ್ಪು ಬಾವುಟ ಪ್ರದರ್ಶಿಸಿ ಅಮಿತ್ ಷಾ ಗೋ ಬ್ಯಾಕ್ ಎಂದು ಕೂಗಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಇದಾದ ಬಳಿಕ ವಿದ್ಯಾಸಾಗರ್​ ಕಾಲೇಜಿನ ಹಾಸ್ಟೆಲ್​ನಿಂದ ವಿದ್ಯಾರ್ಥಿಗಳು ರೋಡ್​ ಶೋ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ವಿದ್ಯಾಸಾಗರ್ ಕಾಲೇಜಿಗೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದಲ್ಲದೇ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಕೋಲ್ಕತ ವಿವಿಯಿಂದ ಎರಡು ಕಿ.ಮೀ ದೂರದಲ್ಲೂ ಹಿಂಸಾಚಾರ ನಡೆದಿದ್ದು, ಬೈಕ್ ಹಾಗೂ ಇತರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಚಿಂತಕ ಈಶ್ವರಚಂದ್ರ ವಿದ್ಯಾಸಾಗರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಜತೆಗೆ ಆವರಣದಲ್ಲಿದ್ದ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

Leave a Reply

Your email address will not be published. Required fields are marked *