ಸಿಬಿಐ ಸಮಗ್ರತೆಯನ್ನು ಎತ್ತಿಹಿಡಿಯಲು ಮುಂದಾಗಿದ್ದಕ್ಕೆ ಸುಳ್ಳು ಆರೋಪಗಳ ಆಧಾರದಲ್ಲಿ ವರ್ಗಾಯಿಸಲಾಗಿದೆ: ಅಲೋಕ್‌ ವರ್ಮಾ

ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಅಸಮಾಧಾನ ಹೊರ ಹಾಕಿದ್ದು, ಸುಳ್ಳು, ರುಜುವಾತಿಲ್ಲದ ಮತ್ತು ನಿಷ್ಪ್ರಯೋಜಕ ಆರೋಪಗಳನ್ನು ಆಧರಿಸಿ ವರ್ಗಾವಣೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ಮತ್ತು ಕರ್ತವ್ಯದ ನಿರ್ಲಕ್ಷ್ಯದ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ನಡೆದ ಆಯ್ಕೆ ಸಮಿತಿ ಸಭೆಯು ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿ ಅಗ್ನಿಶಾಮಕ ವಿಭಾಗದ ಡಿಐಜಿ ಹುದ್ದೆಗೆ ವರ್ಗಾಯಿಸಿತ್ತು.

ಇದಾದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ವರ್ಮಾ, ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಿಬಿಐ ಪ್ರಧಾನ ತನಿಖಾ ಸಂಸ್ಥೆಯಾಗಿದ್ದು, ಅದರ ಸ್ವಾತಂತ್ರ್ಯವನ್ನು ಸಂರಕ್ಷಣೆ ಮತ್ತು ರಕ್ಷಿಸಬೇಕು. ಯಾವುದೇ ಬಾಹ್ಯ ಪ್ರಭಾವಗಳಿಲ್ಲದೆಯೇ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.

ಸಂಸ್ಥೆಯ ಸಮಗ್ರತೆಯನ್ನು ನಾಶಮಾಡಲು ಮುಂದಾದಾಗ ನಾನು ಸಮಗ್ರತೆಯನ್ನು ಎತ್ತಿಹಿಡಿಯಲು ಯತ್ನಿಸಿದೆ. ಅದೇ ರೀತಿ ನ್ಯಾಯ ವ್ಯಾಪ್ತಿಯಿಲ್ಲದೆಯೇ ಕೇಂದ್ರ ಸರ್ಕಾರ ಮತ್ತು ಅ. 23ರ ಸಿವಿಸಿ ಆದೇಶವನ್ನು ನೋಡಬಹುದಾಗಿದೆ. ಒಬ್ಬ ವ್ಯಕ್ತಿ ಮಾಡಿದ ಸುಳ್ಳು ಆಪಾದನೆಗಳ ಆಧಾರದ ಮೇಲೆ ಆಯ್ಕೆ ಸಮಿತಿಯು ನನ್ನನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವಜಾಮಾಡಿ ಮತ್ತೊಂದು ಇಲಾಖೆಗೆ ವರ್ಗಾಯಿಸಿ ಆದೇಶಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

1979ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ವರ್ಮಾ ಅವರನ್ನು ಅಗ್ನಿಶಾಮಕ ವಿಭಾಗದ ಡಿಐಜಿ ಹುದ್ದೆಗೆ ವರ್ಗಾಯಿಸಲಾಗಿದ್ದು, ಸಿಬಿಐನ ನಿರ್ದೇಶಕ ಸ್ಥಾನಕ್ಕೆ ಮತ್ತೆ ಹೆಚ್ಚುವರಿ ನಿರ್ದೇಶಕರಾಗಿದ್ದ ಎಂ ನಾಗೇಶ್ವರ ರಾವ್‌ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಿಬಿಐ ಆಂತರಿಕ ಸಂಘರ್ಷಕ್ಕೆ ಸಂಬಂಧಿಸಿದಂತೆ ಅ.23ರ ಮಧ್ಯರಾತ್ರಿ ನಡೆದ ಹೈಡ್ರಾಮಾದ ಬಳಿಕ ಸಿವಿಸಿ ಶಿಫಾರಸು ಮೇರೆಗೆ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು. ಆದರೆ ಈ ಪ್ರಕ್ರಿಯೆ ಕಾನೂನುಬಾಹಿರವಾಗಿದ್ದು ವರ್ಮಾ ಅವರನ್ನೇ ಸಿಬಿಐ ನಿರ್ದೇಶಕರನ್ನಾಗಿ ಮುಂದುವರಿಸಬೇಕೆಂದು ಸುಪ್ರೀಂಕೋರ್ಟ್ ಜ.8ರಂದು ತೀರ್ಪು ನೀಡಿತ್ತು. ಈ ಆದೇಶ ಹೊರಬಿದ್ದ 48 ಗಂಟೆ ಅವಧಿಯಲ್ಲೇ, ಉನ್ನತಾಧಿಕಾರ ಸಮಿತಿಯು ವರ್ಮಾ ಪದಚ್ಯುತಿ ತೀರ್ಮಾನ ಕೈಗೊಂಡಿದೆ. (ಏಜೆನ್ಸೀಸ್)