ಹುತಾತ್ಮ ಯೋಧರಿಗೆ ವಿವಿಧೆಡೆ ಶ್ರದ್ಧಾಂಜಲಿ, ದಿಗ್ವಿಜಯ ನ್ಯೂಸ್‌ನಲ್ಲೂ ನಮನ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲಿನ ಉಗ್ರರ ದಾಳಿಗೆ ಇಡೀ ದೇಶವೇ ಮರುಗುತ್ತಿದೆ. ದೇಶದ ವಿವಿಧೆಡೆ ಸಾರ್ವಜನಿಕರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ದಿಗ್ವಿಜಯ ನ್ಯೂಸ್‌ ​ವತಿಯಿಂದಲೂ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೋಂಬತ್ತಿ ಬೆಳಗಿಸಿ 1 ನಿಮಿಷ ಮೌನಾಚರಿಸಿ ಗೌರವ ಸಮರ್ಪಿಸಲಾಯಿತು.

ಇನ್ನೊಂದೆಡೆ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರಾಜಭವನ ರಸ್ತೆಯಲ್ಲಿರುವ ಇಂದಿರಾಗಾಂಧಿ ಸೈನಿಕ ಸ್ಮಾರಕದಲ್ಲಿ ಕ್ಯಾಂಡಲ್ ಬೆಳಗಿಸಿ “ಅಮರ್ ರಹೆ ಅಮರ್ ರಹೆ ವೀರ ಜವಾನ್ ಅಮರ್ ರಹೇ ” ಎಂದು ಘೋಷಣೆ ಕೂಗಿದರು. ಸಂಸದೆ ಶೋಭಾ ಕರಂದ್ಲಾಜೆ, ಬಿಬಿಎಂಪಿ ಸದಸ್ಯ ಸಂಪತ್ ಕುಮಾರ್ ಮತ್ತು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ‘ಮಂಡ್ಯದ ಹುತಾತ್ಮ ಯೋಧ ಎಚ್.ಗುರುಗೆ ಸಂತಾಪ ಸೂಚಿಸಲಾಯಿತು. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ, ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ. ಮೋಹನ್ ಸೇರಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಹುಬ್ಬಳ್ಳಿಯಲ್ಲೂ ಶ್ರದ್ಧಾಂಜಲಿ

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಶ್ರದ್ಧಾಂಜಲಿ ಅರ್ಪಿಸಿದರು. ವಕೀಲರ ಸಂಘ, ಕಾರ್ಮಿಕ ಸಂಘ, ರೈತ ಸಂಘಟನೆ ಸೇರಿ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಬಳಿಕ ನಗರದ ಸಾಯಿಬಾಬಾ ದೇವಸ್ಥಾನದಿಂದ ಚೆನ್ನಮ್ಮ ವೃತ್ತದವರೆಗೂ ಕ್ಯಾಂಡಲ್​ ಹಿಡಿದು ಶ್ರದ್ಧಾಂಜಲಿ ಮೆರವಣಿಗೆ ನಡೆಸಲಾಯಿತು.

ಭಯೋತ್ಪಾದನೆ ತೊಲಗಲಿ ಎಂಬ ಘೋಷಣೆ ಮೂಲಕ ಉಗ್ರರ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ ಅವರು, ಉಗ್ರವಾದವನ್ನು ತೊಡೆದುಹಾಕುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. (ದಿಗ್ವಿಜಯ ನ್ಯೂಸ್)