ಉದ್ಯೋಗ ಕೊರತೆ ವಿರುದ್ಧ ಬೀದಿಗಿಳಿದ ಕೆವಾಡಿಯಾ ಬುಡಕಟ್ಟು ಜನ, ಇಂಜಿನಿಯರ್‌ನನ್ನು ಕೂಡಿಹಾಕಿ ಪ್ರತಿಭಟನೆ!

ಕೆವಾಡಿಯಾ: ಗುಜರಾತ್‌ನ ಕೆವಡಿಯಾ ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ಸರೋವರ ಅಣೆಕಟ್ಟೆ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಯನ್ನು ಉದ್ಘಾಟಿಸಿ ಒಂದು ತಿಂಗಳ ಬಳಿಕ ಸ್ಥಳೀಯರು ಉದ್ಯೋಗ ಹಾಗೂ ಮೂಲ ಸೌಕರ್ಯಗಳ ಕೊರತೆ ವಿರುದ್ಧ ಪ್ರತಿಭಟಿಸಲು ಬೀದಿಗೆ ಇಳಿದಿದ್ದಾರೆ.
182 ಮೀಟರ್ ಎತ್ತರದ ಪ್ರತಿಮೆ ನಿರ್ಮಿಸಿರುವ ಸ್ಥಳದಲ್ಲಿ ನಮ್ಮ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ ಎಂದು ಆರೋಪಿಸಿರುವ ಗ್ರಾಮಸ್ಥರ ಗುಂಪು, ಸರ್ದಾರ್ ಸರೋವರ್ ಪುನರ್ವಾಸ್ವತ್‌ ಏಜೆನ್ಸಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅನ್ನು ಅವರ ಕಚೇರಿಯಲ್ಲಿಯೇ ಕೂಡಿ ಹಾಕಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ.
ಈ ಕುರಿತು ಕೆವಾಡಿಯ ಕಾಲನಿಯ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅಜಯ್‌ ದಾಮೊರ್‌ ಮಾತನಾಡಿ, ಬುಡಕಟ್ಟು ಸಮುದಾಯದವರು ಕಾರ್ನನಿರ್ವಾಹಕ ಎಂಜಿನಿಯರ್‌ರನ್ನು ಕಚೇರಿಯಲ್ಲಿ ಕೂಡಿಹಾಕಿದ್ದಾರೆ. ಅವರನ್ನು ರಕ್ಷಿಸಲು ಪೊಲೀಸ್‌ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ನಂತರ ಪರಿಸ್ಥಿತಿಯು ನಿಯಂತ್ರಣಕ್ಕೊಳಗಾಗಿದ್ದು, ಘಟನೆ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಅಣೆಕಟ್ಟಿನ ನಿರ್ಮಾಣ ಮತ್ತು ಏಕತಾ ಪ್ರತಿಮೆ ನಿರ್ಮಾಣದ ಸಮಯದಲ್ಲಿ ಬಹುತೇಕ ಬುಡಕಟ್ಟು ಜನಾಂಗದವರು ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ ಹಾಗೂ ಪುನರ್ವಸತಿ ಹೊಂದಿದ್ದಾರೆ. ಹಾಗಾಗಿ ಅವರು ನೀರು, ವಿದ್ಯುತ್ ಸೇರಿದಂತೆ ಸೌಲಭ್ಯ ಮತ್ತು ಉದ್ಯೋಗ ಕೊರತೆಯ ವಿರುದ್ಧ ಘೋಷಣೆ ಕೂಗುತ್ತಿದ್ದರು ಎಂದು ತಿಳಿಸಿದ್ದಾರೆ.
ಬುಡಕಟ್ಟು ನಾಯಕರೊಬ್ಬರು ಪತ್ರಿಕೆಯೊಂದರೊಂದಿಗೆ ಮಾತನಾಡಿ, ಬುಧವಾರ ಆಯೋಜಿಸಲಾಗುವ ರ‍್ಯಾಲಿಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ‘ಜಮೀನ್ ಬಚಾವೊ, ಆದಿವಾಸಿ ಬಚಾವೊ ಅಂದೋಲನ್’ ಘೋಷಣೆ ಅಡಿಯಲ್ಲಿ ಬುಡಕಟ್ಟು ಜನರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)