ಮರಗಳ ಸರ್ವೇ ಕಾರ್ಯ ಪ್ರಗತಿಯಲ್ಲಿ

ಯಳಂದೂರು: ಒಣಗಿರುವ ತೆಂಗಿನ ಮರಗಳ ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೇಶವ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಒಣಗಿದ ಮರವೊಂದಕ್ಕೆ ಸರ್ಕಾರ 400 ರೂ. ಪರಿಹಾರ ನಿಗದಿ ಮಾಡಿದೆ. ಈ ಹಿಂದೆ ಸರ್ವೇ ನಡೆಸಿದ್ದರೂ ಈಗ ಮತ್ತೊಮ್ಮೆ ಸರ್ವೇ ಕಾರ್ಯ ಮಾಡಲು ಇಲಾಖೆಯ ವತಿಯಿಂದ ಸೂಚನೆ ಬಂದಿದೆ. ಹಾಗಾಗಿ ಈ ಕೆಲಸ ಪ್ರಗತಿಯಲ್ಲಿದೆ. ವಾರದೊಳಗೆ ಕೆಲಸ ಪೂರ್ಣಗೊಳ್ಳಲಿದ್ದು, ನಂತರ ನೇರವಾಗಿ ರೈತರ ಖಾತೆಗೆ ಈ ಹಣ ಜಮಾವಣೆಯಾಗಲಿದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೊಡ್ಡೇಗೌಡ ಮಾತನಾಡಿ, ಸಸ್ಯ ಸಂರಕ್ಷಣೆ ಯೋಜನೆಯಡಿ ಈ ಬಾರಿ 40 ಲಕ್ಷ ರೂ. ಬಿಡುಗಡೆಯಾಗಿದೆ. ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ ಟಾರ್ಪಲ್ ವಿತರಣೆಯಾಗಿಲ್ಲ. ಶೀಘ್ರ ಫಲಾನುಭವಿಗಳ ಪಟ್ಟಿಯನ್ನು ಮಾಡಿ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.

ಜ.18 ರಿಂದ 20 ರವರೆಗೆ ಕೃಷಿ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ ಎಂದರು.

ಶೂನ್ಯ ಬಂಡವಾಳ, ನೈಸರ್ಗಿಕ ಬೇಸಾಯ ಎಂಬ ಹೊಸ ಯೋಜನೆಯನ್ನು ಇಲಾಖೆ ಪರಿಚಯಿಸಿದೆ. ಹೊನ್ನೂರು ಗ್ರಾಮದ 100 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ. ಇದು ಪಾಳೇಕರ್ ವ್ಯವಸಾಯ ಪದ್ಧತಿಯಾಗಿದ್ದು, ಸಾವಯವ ಕೃಷಿಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶ. ರಾಜ್ಯ ಸರ್ಕಾರ ಇದಕ್ಕಾಗಿ 150 ಕೋಟಿ ರೂ. ನೀಡಲು ಉದ್ದೇಶಿಸಿದ್ದು, ಇದರಲ್ಲಿ ಶೇ.90 ರಷ್ಟು ಸಬ್ಸಿಡಿ ಸೌಲಭ್ಯ ರೈತರಿಗೆ ದೊರೆಯಲಿದೆ ಎಂದರು.

ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಸಮಿತಿಗಳ ಸಭೆ ನಡೆಯಿತು. ತಾಪಂ ಅಧ್ಯಕ್ಷ ನಿರಂಜನ್, ಸದಸ್ಯರಾದ ಪದ್ಮಾವತಿ ಮಹದೇವ ನಾಯಕ, ಪಲ್ಲವಿ ಮಹೇಶ್, ಸಿದ್ದರಾಜು, ಇಒ ಬಿ.ಎಸ್.ರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *