ಗಂಗೊಳ್ಳಿ ಬೀಚಲ್ಲಿ ಮರ ಹನನ

>>

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಇಲ್ಲಿನ ಬೀಚ್ ಪರಿಸರದಲ್ಲಿರುವ ಹಲವು ಮರಗಳನ್ನು ಕಡಿದು ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗಂಗೊಳ್ಳಿ ಬೀಚ್ ವಠಾರದಲ್ಲಿನ ಸರ್ಕಾರಿ ಸ್ಥಳದಲ್ಲಿದ್ದ ಸುಮಾರು 30ಕ್ಕೂ ಅಧಿಕ ಮರಗಳನ್ನು ಏಕಾಏಕಿ ಕಡಿದು ಹಾಕಲಾಗಿದೆ. ಹಲವು ವರ್ಷಗಳಿಂದ ಪರಿಸರದ ಜನರಿಗೆ ನೆರಳು ನೀಡುತ್ತಿದ್ದ ಈ ಮರಗಳು ಇದ್ದಕ್ಕಿದ್ದಂತೆ ನೆಲಸಮಗೊಂಡಿದೆ.

ಸ್ಥಳೀಯ ಶಾಲೆಯೊಂದರ ಆಟದ ಮೈದಾನ ಸಮತಟ್ಟು ಮಾಡಿ ಪಾಗಾರ ನಿರ್ಮಿಸುವ ಉದ್ದೇಶದಿಂದ ಈ ಮರಗಳನ್ನು ಕಡಿಯಲಾಗಿದೆ ಎಂದು ಹೇಳಲಾಗುತ್ತಿದ್ದು, ಮರ ಕಡಿಯಲು ಹಾಗೂ ಪಾಗಾರ ನಿರ್ಮಿಸಲು ಅರಣ್ಯ ಇಲಾಖೆ ಅಥವಾ ಸಂಬಂಧಿತ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿಲ್ಲ ಎನ್ನಲಾಗುತ್ತಿದೆ. ಸದೃಢವಾಗಿ ಬೆಳೆದು ನಿಂತಿದ್ದ ಲಕ್ಷಾಂತರ ರೂ. ಬೆಲೆಬಾಳುವ ಮರಗಳು ನೆಲಸಮವಾಗಿದ್ದು ಹೇಳುವವರು ಕೇಳುವವರು ಯಾರೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಶಾಲೆ ಆಟದ ಮೈದಾನದ ನೆಪದಲ್ಲಿ ಸರ್ಕಾರಿ ಭೂಮಿ ಅತಿಕ್ರಮಣ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸರ್ಕಾರಿ ಸ್ಥಳದಲ್ಲಿರುವ ಹಲವಾರು ಮರಗಳನ್ನು ಏಕಾಏಕಿ ಕಡಿದು ಹಾಕಲಾಗಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಯಾದರೋ ಲಾಬಿಗೆ ಅಧಿಕಾರಿಗಳು ಮಣಿದು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ರಸ್ತೆಗೆ ತಾಗಿಕೊಂಡಿರುವ ಜಾಗದಲ್ಲಿ ಆವರಣ ಗೋಡೆ ನಿರ್ಮಿಸುವಾಗ ರಸ್ತೆ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವಿದ್ದರೂ ಅವೆಲ್ಲವನ್ನೂ ಗಾಳಿಗೆ ತೂರಿ ರಸ್ತೆಗೆ ತಾಗಿಕೊಂಡು ಪಾಗಾರ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತ ಮೌನ ವಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಗಂಗೊಳ್ಳಿ ಸುತ್ತಮುತ್ತ ಸರ್ಕಾರಿ ಭೂಮಿ ಅತಿಕ್ರಮಣ ಎಗ್ಗಿಲ್ಲದೆ ನಡೆಯುತ್ತಿದ್ದು ಸಂಬಂಧಿತ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಹಳೆಯ ದಾಖಲೆ ಪರಿಶೀಲಿಸಿ ಸರ್ಕಾರಿ ಭೂಮಿ ಸಂರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕಿದೆ. ಬೇರೆ ಬೇರೆ ಕಾರಣ ನೀಡಿ ಸರ್ಕಾರಿ ಭೂಮಿ ಲಪಟಾಯಿಸಲು ಯತ್ನಿಸುವವರ ವಿರುದ್ಧ ಮತ್ತು ಇಂಥ ಕೃತ್ಯಗಳಿಗೆ ಬೆಂಬಲ ನೀಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗಂಗೊಳ್ಳಿ ಬೀಚ್ ವಠಾರದಲ್ಲಿನ ಶಾಲೆಯೊಂದರ ಆಟದ ಮೈದಾನಕ್ಕೆ ಆವರಣ ಗೋಡೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದುಕೊಂಡಿಲ್ಲ. ಸರ್ಕಾರಿ ಭೂಮಿ ಅತಿಕ್ರಮಣ ಸಂಬಂಧ ಪಂಚಾಯಿತಿಗೆ ಈವರೆಗೆ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಬಿ.ಮಾಧವ, ಕಾರ್ಯದರ್ಶಿ ಗಂಗೊಳ್ಳಿ ಗ್ರಾಪಂ

ಗಂಗೊಳ್ಳಿ ಚರ್ಚ್ ರಸ್ತೆಯ ಬೀಚ್ ವಠಾರದಲ್ಲಿರುವ ಮರಗಳನ್ನು ಕಡಿದು ಹಾಕಿರುವುದು ಇಲಾಖೆ ಗಮನಕ್ಕೆ ಬಂದಿಲ್ಲ. ಮರಗಳನ್ನು ಕಡಿಯಲು ಸಂಬಂಧಪಟ್ಟವರು ಇಲಾಖೆಯಿಂದ ಅನುಮತಿ ಪಡೆದಿಲ್ಲ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಪ್ರಭಾಕರ ಕುಲಾಲ್, ವಲಯ ಅರಣ್ಯಾಧಿಕಾರಿ, ಕುಂದಾಪುರ.

Leave a Reply

Your email address will not be published. Required fields are marked *