ಶಿಥಿಲಗೊಂಡಿರುವ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ ಅಗತ್ಯ ವೈದ್ಯರು, ವೈದ್ಯ ಸಿಬ್ಬಂದಿ ಕೊರತೆ
ಶಾಂತಮೂರ್ತಿ ದೇವನಹಳ್ಳಿ: ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕೆಐಎಡಿಬಿ ನಂತರ ಅನೇಕ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ವಿವಿಧ ಕಂಪನಿಗಳು ತಲೆ ಎತ್ತಿ ಉದ್ಯೋಗಸ್ಥರು ಹೊರ ರಾಜ್ಯಗಳಿಂದ ಇಲ್ಲಿ ಬಂದು ವಾಸಿಸುವುದು ದಿನೇ ದಿನೆ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಜಿಲ್ಲಾ ಕೇಂದ್ರಸ್ಥಾನ ಜಿಲ್ಲಾಡಳಿತ ವ್ಯವಸ್ಥೆ ಇರುವ ದೇವನಹಳ್ಳಿಯಲ್ಲಿ ದೊಡ್ಡಮಟ್ಟದ ಜಿಲ್ಲಾಸ್ಪತ್ರೆಯ ಕೊರತೆ ಕಾಡುತ್ತಿದೆ.
ಪಟ್ಟಣದ ಈಗಿನ ಟಿಎಚ್‌ಒ ಕಚೇರಿ ಹಾಗೂ ಹಾಲಿ ಪತ್ರಕರ್ತರ ಭವನದಲ್ಲಿದ್ದ ಸಾರ್ವಜನಿಕ ಆಸ್ಪತ್ರೆ ಪಟ್ಟಣಕ್ಕೆ 4 ಕಿ.ಮೀ. ದೂರದ ಹೊರವಲಯ ವಿಜಯಪುರ ರಸ್ತೆಯಲ್ಲಿ 80ರ ದಶಕದಲ್ಲಿ 30 ಹಾಸಿಗೆಗಳ ಆಸ್ಪತ್ರೆಯಾಗಿ ಆರಂಭವಾಗಿ ಇದೀಗ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿ ಸಾರ್ವಜನಿಕರ ಸೇವೆಗೆ ಲಭ್ಯವಿದ್ದರೂ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿರುವುದು ವಿಜಯವಾಣಿ ರಿಯಾಲಿಟಿ ಚೆಕ್‌ನಲ್ಲಿ ಕಂಡು ಬಂದಿದೆ.
80ರ ದಶಕದಲ್ಲಿ ಪ್ರಾರಂಭವಾದ ಆಸ್ಪತ್ರೆಯ ಹಳೆಯ ಕಟ್ಟಡ ಶಿಥಿಲವಾಗಿರುವ ಕಾರಣ ಸುಮಾರು 12 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಸಾಮಾನ್ಯ ರೋಗಿಗಳ ಚಿಕಿತ್ಸೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆ ಎರಡು ಸುಸಜ್ಜಿತ ಕಟ್ಟಡಗಳಲ್ಲಿ ರೋಗಿಗಳ ಸಾರ್ವಜನಿಕರ ಚಿಕಿತ್ಸೆ ನಡೆಯುತ್ತಿದೆ. ಇದರ ಹಿಂದೆಯೇ ವೈದ್ಯರ, ನರ್ಸ್‌ಗಳ ವಸತಿ ಗೃಹಗಳಿವೆ. ಶಿಥಿಲವಾಗಿರುವ ಕಟ್ಟಡವನ್ನು ನೆಲಸಮಗೊಳಿಸಿ ಸಕಲ ವೈದ್ಯಕೀಯ ಸೌಲಭ್ಯ ಇರುವ ನೂತನ ಆಸ್ಪತ್ರೆ ಅಗತ್ಯ ಇದೆ.
ನವಜಾತ ಶಿಶುಗಳಿಗೆ ತೀವ್ರ ನಿಗಾ ಘಟಕ ಇಲ್ಲ:ಹೃದ್ರೋಗ ತಜ್ಞ ವೈದ್ಯರ ಅವಶ್ಯಕತೆ ಇದ್ದು, ವಿಮಾನ ನಿಲ್ದಾಣ ಹಾಗೂ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ಇಲ್ಲಿ ಅಪಘಾತಗಳು ಸಂಭವಿಸಿ ತುರ್ತು ಚಿಕಿತ್ಸೆಗೆ ದಾಖಲಿಸಿದರೆ ಐಸಿಯುನಲ್ಲಿ ಸಿಬ್ಬಂದಿ ಕೊರತೆ ಇದೆ. ಹೃದ್ರೋಗ ತಜ್ಞರು, ಮೂಳೆ ತಜ್ಞರು ಸೇರಿದಂತೆ ವಿವಿಧ ತಜ್ಞ ವೈದ್ಯರ ಅವಶ್ಯಕತೆ ಇದೆ. ನವಜಾತ ಶಿಶುಗಳಿಗೆ ತೀವ್ರ ನಿಗಾ ಘಟಕ ಇರುವುದಿಲ್ಲ. ಇಲ್ಲಿ ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನಿಂಗ್ ವ್ಯವಸ್ಥೆಯೇ ಇಲ್ಲವಾಗಿದೆ. 100 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ಇಷ್ಟೊಂದು ಸಿಬ್ಬಂದಿ, ವಿವಿಧ ಘಟಕಗಳ ಕೊರತೆ ತೀವ್ರವಾಗಿದೆ ಎಂಬುದು ಅತಿಶಯೋಕ್ತಿಯೇ ಸರಿ. ವೈದ್ಯ ಸಿಬ್ಬಂದಿ ಕೊರತೆ ಕಾಡುತ್ತಿದ್ದು, 6 ಶುಶ್ರೂಷಕಿಯರ ಕೊರತೆ ಇದೆ. ಇಲ್ಲಿ ಎರಡು ಆಂಬುಲೆನ್ಸ್ ಇವೆ. ವಿಮಾನ ನಿಲ್ದಾಣ ಪಕ್ಕದಲ್ಲಿಯೇ ಇರುವುದರಿಂದ ವಿಐಪಿ ಮೂಮೆಂಟ್‌ಗಳಿಗೆ ಒಂದು ಆಂಬುಲೆನ್ಸ್ ಸದಾ ಹೋಗಬೇಕಾಗುತ್ತದೆ. ಆಗ ಸಾರ್ವಜನಿಕರಿಗೆ ಒಂದು ವಾಹನ ಲಭ್ಯವಾಗಲಿದೆ. ತುರ್ತು ಚಿಕಿತ್ಸೆಗಾಗಿ ಮತ್ತೊಂದು ಅತ್ಯಾಧುನಿಕ ಸೌಲಭ್ಯವುಳ್ಳ ಆಂಬುಲೆನ್ಸ್ ಅವಶ್ಯಕತೆಯೂ ಇದೆ. ತುರ್ತು ಸಮಯದಲ್ಲಿ ಬರುವ ರೋಗಿಗಳನ್ನು ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರು ಹಾಗೂ ಇನ್ನಿತರೆ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತಿದೆ.
ಪ್ರಸೂತಿ ತಜ್ಞರು ಸಿಗುವುದೇ ಕಷ್ಟ: ನಿತ್ಯ 600 ರಿಂದ 800 ಜನ ಹೊರರೋಗಿಗಳು ತಪಾಸಣೆಗೆ ಒಳಗಾಗುತ್ತಾರೆ. ಇಂಥ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಕಾಡುತ್ತಿದೆ. 14 ವೈದ್ಯರಿರಬೇಕಾದ ಆಸ್ಪತ್ರೆಯಲ್ಲಿ 12 ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ನಿತ್ಯ ಸಾರ್ವಜನಿಕರಿಗೆ ಲಭ್ಯವಾಗುವವರು ಆರೇಳು ವೈದ್ಯರು ಮಾತ್ರ. ಪ್ರಸೂತಿ ತಜ್ಞೆ ವೈದ್ಯೆ ಒಬ್ಬರು ಮತ್ತು ಅರಿವಳಿಕೆ ತಜ್ಞರು ಒಬ್ಬರು ಇದ್ದು, ರಾತ್ರಿ ಸೇವೆಯಲ್ಲಿ ಕೇವಲ ಒಬ್ಬ ವೈದ್ಯರು ಲಭ್ಯ ಇರುತ್ತಾರೆ. ರಾತ್ರಿ ವೇಳೆ ಪ್ರಸವಕ್ಕಾಗಿ ತುರ್ತಾಗಿ ಗರ್ಭಿಣಿಯರು ಬಂದರೆ ಇಲ್ಲಿ ಪ್ರಸೂತಿ ತಜ್ಞರು ಸಿಗುವುದೇ ಕಷ್ಟ. ಇರುವ ಒಬ್ಬ ವೈದ್ಯೆ ತಿಂಗಳಿಗೆ ಸುಮಾರು 40 ರಿಂದ 50 ಹೆರಿಗೆ ಮಾಡಿಸಲಷ್ಟೇ ಸಾಧ್ಯವಾಗುತ್ತಿದೆ. ಇಲ್ಲಿ ಮೂವರು ಪ್ರಸೂತಿ ತಜ್ಞರು, ಇಬ್ಬರು ಅರಿವಳಿಕೆ ತಜ್ಞರಿದ್ದರೆ 100 ರಿಂದ 150 ಹೆರಿಗೆ ಮಾಡಿಸಬಹುದು ಮತ್ತು ಒಬ್ಬರೇ ಮಹಿಳಾ ವೈದ್ಯರು ಎರಡು ಪಾಳಿ ಕೆಲಸ ಮಾಡುವುದು ತಪ್ಪಲಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.
ಪೊಲೀಸ್ ಔಟ್‌ಪೋಸ್ಟ್ ನಿರ್ಮಾಣಕ್ಕೆ ಮನವಿ:ಪ್ರಮುಖವಾಗಿ ಇರುವ ಒಂದು ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಸರ್ಕಾರ ಇಲ್ಲಿ ಮತ್ತೊಂದು ಕೊಳವೆಬಾವಿ ಕೊರೆಯಿಸಬೇಕಾದ ಅವಶ್ಯಕತೆ ಇದೆ. ರಾತ್ರಿ ವೇಳೆ ನಿರ್ಜನ ಪ್ರದೇಶದಂತಿರುವ ಇಲ್ಲಿಗೆ ರೋಗಿಗಳು ಬರಲು ಹೆದರುತ್ತಾರೆ. ಹಾಗಾಗಿ ಇಲ್ಲಿ ಒಂದು ಪೊಲೀಸ್ ಔಟ್‌ಪೋಸ್ಟ್ ಅಥವಾ ಪೊಲೀಸ್ ಚೌಕಿ ನಿರ್ಮಿಸಿ ರಾತ್ರಿ ಪಾಳಿಯಲ್ಲಿ ಇಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನಮ್ಮ ಆಸ್ಪತ್ರೆಯಲ್ಲಿ 4 ಹೊಸ ಡಯಾಲಿಸೀಸ್ ಯಂತ್ರಗಳಿದ್ದು, ಇದರಿಂದ ನಿತ್ಯ 8 ರಿಂದ 10 ರೋಗಿಗಳಿಗೆ ಡಯಾಲಿಸಿಸ್ ಮಾಡುಬಹುದಾಗಿದೆ. ನಮ್ಮಲ್ಲಿ ಪ್ರಸ್ತುತ 3 ರಿಂದ 4 ಜನ ಡಯಾಲಿಸಿಸ್‌ಗೆ ಬರುತ್ತಿದ್ದಾರೆ. ತಾಲೂಕು ಸೇರಿ ಸುತ್ತಮುತ್ತಲಿನ ತಾಲೂಕುಗಳ ಯಾರೇ ಬಂದರೂ ನಾವು ಡಯಾಲಿಸಿಸ್ ಮಾಡಲು ಸಿದ್ಧರಿದ್ದೇವೆ. ರೋಗಿಗಳು ಇದರ ಪ್ರಯೋಜ ಪಡೆದುಕೊಳ್ಳಬೇಕು.
-ಕೆ.ಆನಂದ್ ಆಡಳಿತ ವೈದ್ಯಾಧಿಕಾರಿ