ಚೆನ್ನೈ: ದೂರದ ಪ್ಯಾರಿಸ್ನಲ್ಲಿ ಕೊಳಚೆ ಅಥವಾ ಸಂಸ್ಕರಿಸಿದ ನೀರಿನಲ್ಲಿ ಕರೊನಾ ವೈರಸ್ನ ಕುರುಹುಗಳ ಪತ್ತೆಯಾಗಿ ವಿಶ್ವಾದ್ಯಂತ ತಜ್ಞರಲ್ಲಿ ಭಾರಿ ಆತಂಕ ಮೂಡಿಸಿತ್ತು.
ಅದನ್ನೀಗ ದೂರದಲ್ಲೆಲ್ಲೋ ಎನ್ನುವಂತಿಲ್ಲ ಕಾರಣ, ಚೆನ್ನೈ ಮಹಾನಗರದಲ್ಲೂ ಸಂಸ್ಕರಿಸಿದ ನೀರಿನಲ್ಲಿ ಕರೊನಾ ವೈರಸ್ ಕುರುಹುಗಳು ಕಂಡುಬಂದಿವೆ. ಪೂರ್ವಭಾವಿಯಾಗಿ ನಡೆಸಿದ ಪರೀಕ್ಷೆಯಲ್ಲಿ ಈ ವಿಚಾರ ಗೊತ್ತಾಗಿದೆ.
ಕರೊನಾ ಸಂಕಷ್ಟದಿಂದ ತಮಿಳುನಾಡು ಇನ್ನಿಲ್ಲದಂತೆ ಕಂಗೆಟ್ಟಿದೆ. ಹೀಗಾಗಿ ಕೊಳಚೆ ನೀರಿನ ಮೂಲಕವೂ ಕರೊನಾ ಹರಡುತ್ತಿದೆ ಎಂಬ ಜಾಗತಿಕ ವರದಿಗಳ ಹಿನ್ನೆಲೆಯಲ್ಲಿ ನಗರದ ವಿವಿಧೆಡೆಯಲ್ಲಿರುವ ಐದು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿತ್ತು.
ಅಧಿಕೃತ ಹಾಗೂ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಆರ್ಟಿ-ಪಿಸಿಆರ್ ವಿಧಾನದ ಮೂಲಕ ಕೋವಿಡ್-19 ವೈರಸ್ ಆರ್ಎನ್ಎಗಳಿರುವುದನ್ನು ಪತ್ತೆ ಹಚ್ಚಲಾಗಿದೆ. ಒಟ್ಟಾರೆ ನೀರಿನ ಎರಡು ಮಾದರಿಗಳಲ್ಲಿ ಈ ವೈರಸ್ ಕುರುಹುಗಳಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ಅಚ್ಚರಿಯ ವಿಷಯವೆಂದರೆ, ಆ ತ್ಯಾಜ್ಯ ನೀರಿನ ಮಾದರಿ ಪಡೆದ ಸಂಸ್ಕರಣಾ ಘಟಕಗಳಿರುವ ಪ್ರದೇಶದಲ್ಲಿ ಕರೊನಾ ಸೋಂಕಿತರಿರುವುದು ಖಚಿತಪಟ್ಟಿದೆ.
ಕೊಳಚೆ ನೀರಿನಲ್ಲಿ ಕರೊನಾ ವೈರಸ್ ಕುರುಹುಗಳಿರುವುದು ಖಚಿತಪಟ್ಟ ಪ್ರಕರಣ ದೇಶದಲ್ಲೇ ಇದು ಮೊದಲನೆಯದಾಗಿದೆ ಎಂದು ಪ್ರಯೋಗಾಲಯದ ತಜ್ಞರು ಹೇಳಿದ್ದಾರೆ.
ಕೊಳಚೆ ನೀರಿನಿಂದ ಕರೊನಾ ಹರಡುತ್ತೆ ಎಂಬುದನ್ನು ಪರೀಕ್ಷಿಸಲು ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದಲ್ಲಿ ಚೆನ್ನೈನಲ್ಲಿ ನಡೆಸಿದ ಪ್ರಯೋಗ ಇದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತ್ಯಾಜ್ಯ ನೀರಿನ ಮೂಲಕ ವೈರಸ್ ಸಾಂಕ್ರಾಮಿಕವಾಗಲಿದೆ ಎಂಬುದಕ್ಕೆ ಇದು ಸಾಕ್ಷ್ಯವಾಗದು. ಏಕೆಂದರೆ, ನೀರಿನ ಸಂಸ್ಕರಣೆಯಲ್ಲಿ ಕ್ಲೋರಿನ್ ಹಾಗೂ ಇತರ ರಾಸಾಯನಿಕಗಳನ್ನು ಬಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವೈರಸ್ಗಳು ನಾಶವಾಗುತ್ತವೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಕೋವಿಡ್ ಗುಣಲಕ್ಷಣಗಳಿಲ್ಲದಿದ್ದರೂ ಕರೊನಾ ಸೋಂಕು ಹರಡುವುದನ್ನು ತಡೆಯಲು ನೆರವಾಗಲಿದೆ ಎಂಬುದು ತಜ್ಞರ ವಾದ. ಪ್ಯಾರಿಸ್, ನೆದರ್ಲೆಂಡ್ ಸೇರಿ ಹಲವು ರಾಷ್ಟ್ರಗಳಲ್ಲಿ ನಡೆಸಿದ ಪರೀಕ್ಷೆಯಲ್ಲೂ ಕೊಳಚೆ ನೀರಿನಲ್ಲಿ ಕರೊನಾ ಕುರುಹುಗಳಿರೋದು ಗೊತ್ತಾಗಿದೆ.
ಬೆಂಗಳೂರಿನ ತ್ಯಾಜ್ಯ ನೀರಿನಲ್ಲೂ ಕರೊನಾ ಕುರುಹುಗಳಿವೆಯಾ ಎಂಬುದಕ್ಕೆ ಜಲಮಂಡಳಿ ಪರೀಕ್ಷೆ ನಡೆಸುತ್ತಾ ಎಂಬುದನ್ನು ನೋಡಬೇಕಿದೆ.