ಕುಂದಗೋಳ: ಗಂಡು-ಹೆಣ್ಣು ಎನ್ನುವ ಭೇದ ಭಾವ ಮನಸಿನಿಂದ ತೆಗೆದು ಹಾಕಬೇಕು. ಗಂಡು ಮಗು ಹುಟ್ಟಿದಾಗ ಎಷ್ಟು ಸಂಭ್ರಮ ಪಡುತ್ತೇವೋ ಅದಕ್ಕೂ ಹೆಚ್ಚು ಹೆಣ್ಣು ಮಗು ಹುಟ್ಟಿದಾಗ ಸಂಭ್ರಮ ಪಡಬೇಕು. ಹೆಣ್ಣು ಮಕ್ಕಳನ್ನು ಎಲ್ಲ ರಂಗದಲ್ಲಿ ಸರಿಸಮನಾಗಿ ಕಾಣಬೇಕು ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಪಟ್ಟಣದ ಕಲ್ಯಾಣಪುರ ಬಸವಣ್ಣ ಅಜ್ಜನವರ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾಪಂ, ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿರು.
ಹೆಣ್ಣು ಮಕ್ಕಳಲ್ಲಿ ಪ್ರೀತಿ, ಕರುಣೆ, ಕಾಳಜಿ, ವಿಶ್ವಾಸ ವಿಶೇಷವಾಗಿರುತ್ತದೆ. ನನಗೆ ಇರುವುದು ಒಬ್ಬಳೇ ಮಗಳು. ನನಗೆ ಗಂಡು ಮಕ್ಕಳಿಲ್ಲ. ನನಗೆ ಗಂಡು-ಹೆಣ್ಣು ಎಂಬ ಭೇದವಿಲ್ಲ. ಹೆಣ್ಣುಮಗಳು ಇರುವುದೇ ನನಗೆ ಸಂತೋಷ ಕೊಟ್ಟಿದೆ. ಎಲ್ಲ ತಾಯಂದಿರು ಗಂಡು ಮಗುವಿಕ್ಕಿಂತ ಹೆಣ್ಣು ಮಗು ಹುಟ್ಟಿದಾಗ ಹೆಚ್ಚು ಖುಷಿಪಡಬೇಕು ಎಂದರು.
ಹೆಣ್ಣು ಮಕ್ಕಳನ್ನು ರಕ್ಷಿಸುವ ಕೆಲಸವಾಗಬೇಕು. ಈ ಉದ್ದೇಶದಿಂದ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಉಳಿವಿಗೆ, ಸಂರಕ್ಷಣೆ, ಪೋಷಣೆ ಹಾಗೂ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಯೋಜನೆ ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ.ಎಚ್.ಎಚ್. ಕುಕನೂರ ಮಾತನಾಡಿ, ಭ್ರೂಣಹತ್ಯೆ ತಡೆಗೆ ಈಗಾಗಲೇ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪಾಲಕರು ಹೆಣ್ಣು ಮಕ್ಕಳಿಗೆ ಪದವಿವರೆಗೆ ಶಿಕ್ಷಣ ನೀಡಬೇಕು. 18 ವರ್ಷದ ನಂತರ ವಿವಾಹ ಮಾಡಬೇಕು ಎಂದರು.
ಕರ್ಮಣಿ ಮಹಿಳಾ ಸಾಂತ್ವಾನ ಕೇಂದ್ರದ ತಾಲೂಕು ಅಧಿಕಾರಿ ಎನ್.ಬಿ. ಹೊಸಮನಿ ಉಪನ್ಯಾಸ ನೀಡಿದರು. ತಹಸೀಲ್ದಾರ್ ರಾಜು ಮಾವರಕರ, ತಾಪಂ ಇಒ ಜಗದೀಶ ಕಮ್ಮಾರ, ಸಿಪಿಐ ಶಿವಾನಂದ ಅಂಬಿಗೇರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನೂರಜಹಾನ್ ಕಿಲ್ಲೇದಾರ, ರವಿಗೌಡ ಪಾಟೀಲ, ಉಮೇಶ ಹೆಬಸೂರ, ಪ್ರಕಾಶ ಕೋಕಟೆ , ದಾನಪ್ಪ ಗಂಗಾಯಿ, ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಅನೇಕರಿದ್ದರು.
ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಂಸಾ ಪತ್ರ ನೀಡಿ ಶಾಸಕ ಎಂ.ಆರ್. ಪಾಟೀಲ ಗೌರವಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾ ನಾಡಗೌಡ ಸ್ವಾಗತಿಸಿದರು. ರಾಜೇಶ್ವರಿ ಬಡಿಗೇರ ನಿರೂಪಿಸಿದರು. ರೇಣುಕಾ ಕಮ್ಮಾರ ವಂದಿಸಿದರು.