ಬೆಂಗಳೂರು: ಪವಿತ್ರ ಗೌಡ ಅವರಿಗೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ. ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಿದ ಉದಾಹರಣೆಗಳಿವೆ. ಪತಿಯನ್ನೇ ಕೊಂದ ಪತ್ನಿಗೂ ಮಹಿಳೆ ಎಂಬ ಕಾರಣಕ್ಕೆ ಜಾಮೀನು ದೊರಕಿರುವ ನಿದರ್ಶನಗಳಿವೆ. ಪವಿತ್ರಾ ಗೌಡಗೆ ಒಂಭತ್ತನೇ ತರಗತಿಯಲ್ಲಿ ಓದುವ ಮಗಳಿದ್ದಾಳೆ. ಈ ಎಲ್ಲ ಅಂಶ ಪರಿಗಣಿಸಿ ಜಾಮೀನು ನೀಡಬೇಕು… ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಮಂಗಳವಾರ ಹೈಕೋರ್ಟ್‌ಗೆ ಮನವಿ ಮಾಡಿದರು.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ನಟ ದರ್ಶನ್ ಮತ್ತಿತರರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರ (ಡಿ.6)ಕ್ಕೆ ಮುಂದೂಡಿದೆ. ಜಾಮೀನು ಕೋರಿ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್.ನಾಗರಾಜು, ಎಂ.ಲಕ್ಷ್ಮಣ್ ಅನು ಕುಮಾರ್ , ಜಗದೀಶ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠವು ಮಂಗಳವಾರ ಮುಂದುವರಿಸಿತು.
ಪವಿತ್ರಾ ಗೌಡ ಮತ್ತು ನಟ ದರ್ಶನ್ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ರೇಣುಕಸ್ವಾಮಿ ಅರ್ಜಿದಾರೆಗೆ ನಿರಂತರವಾಗಿ ಅಶ್ಲೀಲ ಸಂದೇಶ ರವಾನಿಸುತ್ತಿದ್ದ. ಅದನ್ನು ನೋಡಿ ಪವಿತ್ರಾ ಅವರಿಗೆ ಆಘಾತವಾಗಿದೆ. ನೋವನ್ನು 3ನೇ ಆರೋಪಿ ಪವನ್ ಬಳಿ ತೋಡಿಕೊಂಡಿದ್ದರು. ಆತ ಕೆಲವರ ಸಹಾಯದಿಂದ ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿದ್ದಾನೆ. ಎ2 ದರ್ಶನ್ ಜತೆ ಬಂದ ಪವಿತ್ರಾ, ರೇಣುಕ ಸ್ವಾಮಿ ಕಪಾಳಕ್ಕೆ ಹೊಡೆದಿದ್ದರು.
ಪವಿತ್ರಾ ಚಪ್ಪಲಿ ಪಡೆದುಕೊಂಡು ದರ್ಶನ್ ರೇಣುಕಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ಕೊಲೆ ಮಾಡುವ ಉದ್ದೇಶದಿಂದ ಕರೆದುಕೊಂಡು ಬರಲಾಗಿಲ್ಲ. ಆರೋಪಿಗಳು ಜೀವ ತೆಗೆಯುವ ಉದ್ದೇಶ ಹೊಂದಿರಲಿಲ್ಲ. ಎಲ್ಲರೂ ಹಲ್ಲೆ ನಡೆಸಿರುವ ಹಿನ್ನೆಲೆ ಆತನ ಸಾವು ಸಂಭವಿಸರಬಹುದೇನೊ. ಜೀವ ತೆಗೆಯುವ ಯತ್ನ ಯಾರೊಬ್ಬರು ಮಾಡಿಲ್ಲ. ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಇದೆ, ಆದರೆ, ಸಾಕ್ಷಿಗಳ ಹೇಳಿಕೆಯಲ್ಲಿ ಪ್ರಚೋದನೆ ನೀಡಿರುವ ಯಾವ ಅಂಶವೂ ಸಹ ಇಲ್ಲ ಎಂದು ಸ್ಪಷ್ಟನೆ ನೀಡಲು ಮುಂದಾದರು.
ಯಾವ ಪ್ರತ್ಯಕ್ಷ ಸಾಕ್ಷಿಯೂ ಪವಿತ್ರಾ ಅವರತ್ತ ಬೆರಳು ಮಾಡಿಲ್ಲ. ಹಾಗೆಯೇ, ನಟ ಚಿಕ್ಕಣ್ಣ, ನವೀನ್ ಕುಮಾರ್, ಯಶಸ್ ಸೂರ್ಯ ಅವರ ಹೇಳಿಕೆಗಳನ್ನು ಪರಿಶೀಲಿಸಿದರೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ರೇಣುಕಸ್ವಾಮಿ ಕೊಲೆ ಮಾಡುವ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಯಾವ ಪ್ರತ್ಯಕ್ಷ ಸಾಕ್ಷಿಯೂ ಪವಿತ್ರಾ ಗೌಡರತ್ತ ಬೆರಳು ಮಾಡಿಲ್ಲ ಎಂಬುದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು. ಆರೋಪಿ ಅನುಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ ಅವರನ್ನು ಪ್ರತಿನಿಧಿಸಿದ್ದ ವಕೀಲ ರಂಗನಾಥ್ ರೆಡ್ಡಿ, ಕರೆ ದಾಖಲೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ರೇಖಾಚಿತ್ರದಲ್ಲಿ ಅನುಕುಮಾರ್ ಮತ್ತು ಜಗದೀಶ್ ಇಲ್ಲ. ಪ್ರತ್ಯಕ್ಷ ಸಾಕ್ಷಿಗಳೂ ಪ್ರತಿಕೂಲವಾಗಿ ತಮ್ಮ ಕಕ್ಷಿದಾರರ ವಿರುದ್ಧ ಏನೂ ಹೇಳಿಲ್ಲ. ಹೀಗಾಗಿ, ಜಾಮೀನು ನೀಡಬೇಕು ಎಂದು ಕೋರಿದರು.