ಇಳಕಲ್ಲ: ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರ ಬೊಕ್ಕಸವನ್ನು ಲೂಟಿ ಹೊಡೆದು ಖಜಾನೆ ಖಾಲಿಮಾಡಿ, ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ರಾಜ್ಯವನ್ನು ಆರ್ಥಿಕವಾಗಿ ಹೀನಾಯ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.
ಬುಧವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ರೈತ ವಿರೋಧಿ ಸರ್ಕಾರ ಎಂದು ಅಪಪ್ರಚಾರ ಮಾಡಿದ ಕಾಂಗ್ರೆಸ್ ಇವತ್ತು ರೈತರು ಬಿತ್ತನೆ ಬೀಜ ತೆಗೆದುಕೊಳ್ಳಬೇಕಾದರೆ ದುಬಾರಿ ಬೆಲೆಯಿಂದ ಕಣ್ಣೀರು ಸುರಿಸುವ ಪರಿಸ್ಥಿತಿಗೆ ತಂದು ಇಟ್ಟಿದ್ದಾರೆ. ರೈತರಿಗೆ ಕಣ್ಣೀರು ತರಿಸಿದ ಸರ್ಕಾರ ಅವರ ಶಾಪದಿಂದಲೇ ವಿನಾಶದಂಚಿಗೆ ತಲುಪಲಿದೆ ಎಂದರು.
ನಮ್ಮ ಮತಕ್ಷೇತ್ರದ ಶಾಸಕ ಹಾಗೂ ಸಹೋದರ ದೇವಾನಂದ ಕಾಶಪ್ಪನವರ ಅಕ್ರಮ ಮರಳು ದಂಧೆ, ಇಸ್ಪಿಟ್ ದಂಧೆ ನಡೆಸಿ ಹಿಂಬಾಗಿಲಿನಿಂದ ಕಮೀಷನ್ ತಮ್ಮ ಮನೆಗೆ ಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಇಸ್ಪಿಟ್ ದಂಧೆಯಿಂದ ಗ್ರಾಮೀಣ ಭಾಗದ ಜನತೆ ನೊಂದುಕೊಂಡಿದ್ದು, ಕ್ಷೇತ್ರದ ಶಾಸಕರಿಗೆ ಅದೆಷ್ಟೋ ತಾಯಂದಿರು ಇಡೀ ಶಾಪ ಹಾಕುತ್ತಿದ್ದಾರೆ. ಕೆಲವು ಪ್ರಬಲ ಜಾತಿಗಳಿಗೆ ಹಿಂಬಾಗಿಲಿನಿಂದ ಸಪೋರ್ಟ್ ಮಾಡುವ ಶಾಸಕರು, ಕೆಲವು ತಮ್ಮ ಪಕ್ಷದವರಿಂದಲೇ ತಮ್ಮ ಪಕ್ಷದವರಿಗೆ ಲವ್ ಜಿಹಾದ್‌ನಂತಹ ಪ್ರಕರಣಗಳು ನಡೆದೂ ತಲೆ ಕೆಡಿಸಿಕೊಳ್ಳದೇ ಕ್ಯಾರೆ ಎನ್ನದೇ ನಡೆದುಕೊಳ್ಳುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಶಾಸಕರು ಮತಕ್ಷೇತ್ರದ ಜನತೆಗೆ ತ್ಯಾಪೆ ಎಳೆಯುತ್ತಿದ್ದು, ಮುಂದಿನ ದಿನಮಾನದಲ್ಲಿ ಶಾಸಕರ ಕಾರ್ಯವೈಖರಿ ಮತಕ್ಷೇತ್ರದ ಜನರಿಗೆ ಗೊತ್ತಾಗಲಿದೆ ಎಂದು ಹೇಳಿದರು.
ನಗರ ಸಭೆ ಸಿಬ್ಬಂದಿ ವಾಣಿಜ್ಯ ಮಳಿಗೆಗಳ ಬಾಡಿಗೆ ಕಟ್ಟಿ ಎಂದು ಬಾಡಿಗೆ ಪಡೆದ ಗ್ರಾಹಕರಿಗೆ ಹೇಳಿದರೆ ‘ನಮ್ಮ ದೊಡ್ಡ ಸಾಹೇಬರು ಹೇಳಿದರೆ ಕಟ್ತೀನಿ’ ಎಂದು ಹೇಳುತ್ತಾರೆ. ಇದು ನಮ್ಮ ಮತಕ್ಷೇತ್ರದ ಪರಿಸ್ಥಿತಿ ಎಂತ ಹೀನಾಯ ಸ್ಥಿತಿ ತಲುಪುತ್ತಿದೆ ಎಂದು ಮತಕ್ಷೇತ್ರದ ಜನರು ನೋಡುತ್ತಿದ್ದಾರೆ. ನಗರಸಭೆ ಕಟ್ಟಡಗಳ ಬಾಡಿಗೆ ಕಟ್ಟಲು ಶಾಸಕರ ಅನುಮತಿ ಬೇಕೆ? ಇದು ಯಾವ ಕಾನೂನಿನಲ್ಲಿದೆ? ನಮಗಂತೂ ಗೋಚರವಾಗುತ್ತಿಲ್ಲ. ಹೀಗಾಗಿ ಹುನಗುಂದ ಮತಕ್ಷೇತ್ರದಲ್ಲಿ ‘ಅಂದಾ ದರ್ಬಾರ್’ ನಡೆಯುತ್ತಿದ್ದು ಇದು ಬಹಳ ದಿನ ನಡೆಯುವುದಿಲ್ಲ. ಶಾಸಕರ ಜಾತ್ರೆ ಶೀಘ್ರದಲ್ಲೇ ಅಂತ್ಯಗೊಳ್ಳಲಿದ್ದು ನಿಮ್ಮ ಗುಂಡಾ ವರ್ತನೆ ದಬ್ಬಾಳಿಕೆ, ಅಕ್ರಮ ಮರಳು ದಂಧೆಗಳನ್ನು ಜನತೆ ಗಮನಿಸುತ್ತಿದ್ದಾರೆ ಎಚ್ಚರಿಕೆಯಿಂದಿರಿ ಎಂದು ಹೇಳಿದರು.
ಬಿಜೆಪಿ ಮಹಾಂತಗೌಡ ತೊಂಡಿಹಾಳ, ಲಕ್ಷ್ಮಣ ಗುರಂ, ಮಹಾಂತಪ್ಪ ಚೆನ್ನಿ, ಅಜ್ಜಪ್ಪ ಗೌಡ ನಾಡಗೌಡ, ಸೂಗುರೇಶ ನಾಗಲೋಟಿ, ಚಂದ್ರಶೇಖರ ಏಕಬೋಟಿ ಇತರರಿದ್ದರು.