ಮಂಗಳೂರು: ದುಬೈನಿಂದ ಮಂಗಳೂರಿಗೆ ಗುರುವಾರ ಮುಂಜಾನೆ 4.30ಕ್ಕೆ ಬಂದಿಳಿಯಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹಲವು ಗಂಟೆ ತಡವಾಗಿ ಬಂದಿಳಿದಿದೆ.
ಬುಧವಾರ ರಾತ್ರಿ 11.40ಕ್ಕೆ ವಿಮಾನ ದುಬೈನಿಂದ ಮಂಗಳೂರಿಗೆ ಹೊರಡಬೇಕಿತ್ತು. ಪ್ರಯಾಣಿಕರನ್ನು ವಿಮಾನದಲ್ಲಿ ಕುಳ್ಳಿರಿಸಿ ತಾಸುಗಳು ಕಳೆದರೂ ವಿಮಾನ ಹಾರಾಟ ಆರಂಭಿಸಿರಲಿಲ್ಲ. ತಾಂತ್ರಿಕ ದೋಷ ಎಂದು ಹೇಳಿ ಪ್ರಯಾಣಿಕರನ್ನು ವಿಮಾನದಲ್ಲಿಯೇ ಕುಳಿತುಕೊಳ್ಳುವಂತೆ ಸೂಚಿಸಲಾಗಿತ್ತು. ಇನ್ನೇನು ಹೊರಡುತ್ತದೆ ಎಂದು ಕಾದು ಕಾದು ಸುಸ್ತಾದರು. ರಾತ್ರಿ ಇಡೀ ವಿಮಾನದಲ್ಲೇ ಕಾಲಕಳೆಯಬೇಕಾಯಿತು. ಕೊನೆಗೂ ಬೆಳಗ್ಗಿನ ಜಾವ 5.30ಕ್ಕೆ ವಿಮಾನ ದುಬೈನಿಂದ ಪ್ರಯಾಣ ಆರಂಭಿಸಿದ್ದು, ಬೆಳಗ್ಗೆ 10.30ಕ್ಕೆ ಮಂಗಳೂರು ತಲುಪಿದೆ.
ವಿಮಾನದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ, ಪೈಲಟ್ ಬಾರದ ಹಿನ್ನೆಲೆಯಲ್ಲಿ ವಿಮಾನ ರಾತ್ರಿಯಿಡೀ ಉಳಿಯುವಂತಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ. ಏರ್ ಇಂಡಿಯಾ ಅಧಿಕಾರಿಗಳು ತಡವಾಗಿರುವುದನ್ನು ಒಪ್ಪಿಕೊಂಡಿದ್ದು, ನೈಜ ಕಾರಣ ತಿಳಿದಿಲ್ಲ ಎಂದಿದ್ದಾರೆ. ಪ್ರಯಾಣಿಕರಿಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡದೆ, ವಿಮಾನದಲ್ಲೇ ಉಳಿಸಿಕೊಳ್ಳಲಾಗಿತ್ತು. ಹೀಗಾಗಿ ಮಹಿಳೆಯರು ಮಕ್ಕಳು ತೊಂದರೆಗೊಳಗಾಗಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.