
ಕಳಸ: ಭದ್ರಾ ನದಿಯ ಒಡಲು ಧಾರ್ವಿುಕ ಪರಿಕರಗಳ ವಿಲೇವಾರಿ ತಾಣ ಮತ್ತು ಪ್ರವಾಸಿಗರ ಬಯಲು ಶೌಚ ಸ್ಥಳವಾಗಿ ಮಾರ್ಪಾಡಾಗುತ್ತಿದ್ದು, ದಿನೇದಿನೆ ಮಲಿನವಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ.
ಹೊರನಾಡು ಕ್ಷೇತ್ರಕ್ಕೆ ತೆರಳುವ ಮಾರ್ಗಮಧ್ಯೆ ಸಿಗುವ ಹೆಬ್ಬಾಳೆ ಎಂಬಲ್ಲಿ ಹರಿಯುವ ಭದ್ರಾ ನದಿಗೆ ತ್ಯಾಜ್ಯ ಸೇರುತ್ತಿದೆ. ಸಾವಿರಾರು ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಆದರೆ ಅವರು ಭದ್ರಾ ನದಿಯನ್ನು ಎಷ್ಟು ಸಾಧ್ಯವೋ ಅಷ್ಟು ಕಲುಷಿತಗೊಳಿಸುತ್ತಿದ್ದಾರೆ.
ಪುಣ್ಯ ಸ್ನಾನಕ್ಕೆ ಭದ್ರೆಗೆ ಇಳಿದು ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಲ್ಲದೆ ಬಂದಿರುವ ವಾಹನವನ್ನು ನದಿಗೆ ಇಳಿಸಿ ಅದರಲ್ಲಿದ್ದ ಪ್ಲಾಸ್ಟಿಕ್ ಇನ್ನಿತರೆ ತ್ಯಾಜ್ಯಗಳನ್ನು ನದಿಗೆ ಹಾಕುತ್ತಿದ್ದಾರೆ. ಊರಿಂದಲೇ ಬರುವಾಗ ದೇವರ ಫೊಟೊಗಳು, ಧಾರ್ವಿುಕ ಪರಿಕರಗಳನ್ನು ಹಳೆಯ ಬಟ್ಟೆಗಳಲ್ಲಿ ಸುತ್ತಿ ತಂದು ಇಲ್ಲಿ ಬಿಸಾಡುತ್ತಿದ್ದಾರೆ.
ನದಿಯ ದಡದಲ್ಲಿ ಶೌಚ ಮಾಡುತ್ತಿರುವ ಪರಿಣಾಮ ಪರಿಸರ ದುರ್ನಾತದಿಂದ ಕೂಡಿದೆ. ಇದರಿಂದ ಸಭ್ಯರು ನೀರಿಗೆ ಇಳಿಯದ ಪರಿಸ್ಥಿತಿ ನಿರ್ವಣವಾಗಿದೆ. ಇನ್ನು ಕೆಲ ಪ್ರವಾಸಿಗರು ರಾತ್ರಿ ಪಾರ್ಟಿಗೆ ಇದೇ ಸ್ಥಳ ಆಯ್ದುಕೊಳ್ಳುತ್ತಿದ್ದಾರೆ. ಇಲ್ಲಿಯೇ ಅಡುಗೆ ತಯಾರಿಸಿ ಹೊಟ್ಟೆ ತುಂಬ ಗುಂಡು, ತುಂಡಿನ ಪಾರ್ಟಿ ಮಾಡುತ್ತಾರೆ. ಮದ್ಯದ ಬಾಟಲಿಗಳನ್ನು ಒಡೆದು ನದಿಗೆ ಎಸೆಯುತ್ತಿದ್ದಾರೆ.
ನದಿಯಲ್ಲಿ ಹರಿಯುವ ನೀರು ಲಕ್ಷಾಂತರ ಜನರು, ಪ್ರಾಣಿ ಪಕ್ಷಿಗಳಿಗೆ, ಜಲಚರಗಳಿಗೆ ಜೀವಜಲವಾಗಿದೆ. ಆದರೆ ದೂರದೂರಿನಿಂದ ಬರುವ ಪ್ರವಾಸಿಗರ ಕುಚೇಷ್ಟೆಯಿಂದ ಹೆಬ್ಬಾಳೆ ಸಮೀಪ ಭದ್ರಾ ನದಿ ನೀರನ್ನು ಯಾರೂ ಕೂಡ ಮುಟ್ಟದಿರುವ ಪರಿಸ್ಥಿತಿ ಉಂಟಾಗಿದೆ. ವಾಹನಗಳನ್ನು ತೊಳೆಯುವಾಗ ಪೆಟ್ರೋಲಿಯಂ ವೇಸ್ಟ್ ನದಿಗೆ ಸೇರುತ್ತಿದೆ.
ಜನಪ್ರತಿನಿಧಿಗಳ ಭರವಸೆ ಹುಸಿ: ಎರಡು ವರ್ಷಗಳ ಹಿಂದೆ ಹೊರನಾಡು ರೋಟರಿ ಸಮುದಾಯ ದಳ ಇದೇ ಸ್ಥಳದ ಶುದ್ಧೀಕರಣ ಮಾಡಿ ನಾಮಫಲಕ ಅಳವಡಿಸಿತ್ತು. ಇದಾಗಿ ಕೆಲವೇ ದಿನಗಳಲ್ಲಿ ನದಿಯ ಪರಿಸ್ಥಿತಿ ಯಥಾಸ್ಥಿಗೆ ಬಂದು ತಲುಪಿದೆ. ಕಳೆದ ವರ್ಷ ಕಳಸದ ಪ್ರಥಮದರ್ಜೆ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಸ್ವಚ್ಛತೆ ಮಾಡಿದ್ದರು. ಆದರೆ ಪರಿಸ್ಥಿತಿ ಸುಧಾರಣೆಯಾಗದ ಹಿನ್ನೆಲೆಯಲ್ಲಿ ಈ ಬಾರಿ ಆ ಸ್ಥಳದ ಶುದ್ಧೀಕರಣ ಮಾಡಿಲ್ಲ. ಇಲ್ಲಿ ಶೌಚಗೃಹ ನಿರ್ವಿುಸಲು ಕ್ರಮ ಕೈಗೊಳ್ಳುವ ಬಗ್ಗೆ ಈ ಹಿಂದೆ ಜನಪ್ರತಿನಿಧಿಗಳು ಕೊಟ್ಟ ಭರವಸೆಯೂ ಹುಸಿಯಾಗಿದೆ.
ಭದ್ರಾ ನದಿಯ ಒಡಲು ಪ್ರವಾಸಿಗರ ಕುಚೇಷ್ಟೆಯಿಂದ ಮಲಿನವಾಗುತ್ತಿರುವುದು ಬೇಸರ ತರಿಸುತ್ತದೆ. ತ್ಯಾಜ್ಯ ಸುರಿದು, ಮಲ ಮೂತ್ರ ವಿಸರ್ಜನೆ ಮಾಡಿ ಇಡೀ ನದಿಯ ಪಾವಿತ್ರ್ಯ್ಕೆ ಧಕ್ಕೆ ತರಲಾಗುತ್ತಿದೆ. ಇಲ್ಲಿ ಶೌಚಗೃಹ ನಿರ್ವಿುಸಬೇಕಿದ್ದು, ಸಂಬಂಧಿಸಿದವರು ಗಮನಹರಿಸಬೇಕಿದೆ ಎಂಬುದು ಕಳಸ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕಿರಣ್ ಶೆಟ್ಟಿ ಅವರ ಅಭಿಪ್ರಾಯ.