ನದಿ ಶುದ್ಧೀಕರಣಕ್ಕೆ ಟ್ರಾೃಷ್ ಬೂಮ್ ಯೋಜನೆ

1 Min Read
ನದಿ ಶುದ್ಧೀಕರಣಕ್ಕೆ ಟ್ರಾೃಷ್ ಬೂಮ್ ಯೋಜನೆ

ಗೋಣಿಕೊಪ್ಪ: ಕಾವೇರಿ, ಲಕ್ಷ್ಮಣತೀರ್ಥ ನದಿ, ಕಿರುಹೊಳೆಗಳು, ಕೊಡಗಿನ ತೋಡು, ತೊರೆಗಳ ಶುದ್ದೀಕರಣಕ್ಕೆ ಕೊಡಗಿನ ಕ್ಲೀನ್ ಕೂರ್ಗ್ ಸಂಸ್ಥೆ ಹೆಜ್ಜೆ ಇಟ್ಟಿದೆ.

ಹರಿಯುವ ನೀರು ಪ್ಲಾಸ್ಟಿಕ್‌ಮುಕ್ತವಾಗಿ ಸಂಚರಿಸಲು ಅನುಕೂಲ ಕಲ್ಪಿಸಲು ‘ಟ್ರಾೃಷ್‌ಬೂಮ್’ ಯೋಜನೆ ಅಳವಡಿಸಲು ಚಿಂತಿಸಿದೆ. ಪ್ರಥಮವಾಗಿ ಗೋಣಿಕೊಪ್ಪದ ಕೀರೆ ಹೊಳೆಗೆ ಅನುಷ್ಠಾನಗೊಳಿಸುವ ಪ್ರಯತ್ನ ಸಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ನದಿಯಲ್ಲಿ ತೇಲಿ ಹೋಗುವುದನ್ನು ತಡೆಗಟ್ಟಲು ಕೊಡಗಿನಲ್ಲಿ ಇದು ಹೊಸ ನಡೆಯಾಗಿದೆ. ಮಂಗಳೂರು ಭಾಗಗಳಲ್ಲಿ ಪ್ಲಾಸ್ಟಿಕ್ ಫಿಶರ್ ಸಂಸ್ಥೆ ಈಗಾಗಲೇ ಹಲವು ನದಿಗಳಿಗೆ ಈ ಪ್ರಯೋಗ ನಡೆಸಿ ಯಶಸ್ಸನ್ನು ಕಂಡಿದೆ.
ಕೊಡಗನ್ನು ಪ್ಲಾಸ್ಟಿಕ್‌ಮುಕ್ತ ಪರಿಸರವನ್ನಾಗಿ ಮಾಡುವ ಪ್ರಯತ್ನಕ್ಕಾಗಿ ಹಲವು ವರ್ಷಗಳಿಂದ ಕ್ಲೀನ್ ಕೂರ್ಗ್ ಸಂಸ್ಥೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಸಂಸ್ಥೆಯ ಸದಸ್ಯರೇ ಸ್ವತಃ ಹಣ ಹೊಂದಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದೆ. ಈಗಾಗಲೇ ಪ್ರಥಮ ಪ್ರಾಯೋಗಿಕವಾಗಿ ಗೋಣಿಕೊಪ್ಪದ ಕೀರೆ ಹೊಳೆಯಲ್ಲಿ ತೇಲಿ ಹೋಗುತ್ತಿರುವ ಪ್ಲಾಸ್ಟಿಕ್ ಬಾಟಲಿ ಇನ್ನಿತರೆ ತ್ಯಾಜ್ಯಗಳ ತಡೆಗೆ ಕ್ರಮ ಕೈಗೊಂಡಿದೆ. ಒಂದೂವರೆ ಇಂಚು ನೀರಿನ ಪೈಪ್ ಮತ್ತು ಕಬ್ಬಿಣದ ಮೆಷ್‌ಗಳ ಬಳಕೆಯಿಂದ ತಯಾರಿಸಿದ ಉಪಕರಣವನ್ನು ನದಿಯಲ್ಲಿ ಪ್ರತಿಷ್ಠಾಪಿಸಿ ಹರಿದು ಹೋಗುವ ತ್ಯಾಜ್ಯಗಳನ್ನು ತಡೆಗಟ್ಟಲು ಕ್ರಮವಹಿಸಲಾಗುತ್ತಿದೆ.

ಹಗುರವಾದ ಪೈಪ್ ನೀರಿನ ಮೇಲೆ ತೇಲುವುದರಿಂದ ಮತ್ತು ಪೈಪ್ ಕೆಳಭಾಗದಲ್ಲಿ ಮೆಷ್ ಅಳವಡಿಸಿರುವುದರಿಂದ ನೀರಿನೊಂದಿಗೆ ತೇಲಿ ಬರುವ ಪ್ಲಾಸ್ಟಿಕ್ ಉತ್ಪನ್ನಗಳು ಮೆಸ್‌ಗೆ ಸಿಲುಕಿಕೊಳ್ಳುತ್ತದೆ. ಒಂದೇ ಕಡೆ ತ್ಯಾಜ್ಯಗಳು ಸಂಗ್ರಹವಾಗುವುದರಿಂದ ನದಿಯ ಶುದ್ಧೀಕರಣ ಸುಲಭವಾಗಲಿದೆ ಎಂಬುದು ಸಂಸ್ಥೆಯ ಉದ್ದೇಶ.

See also  ದೇಶದ ಸಂಸ್ಕೃತಿ ಅರಿತುಕೊಳ್ಳಿ
Share This Article