Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಶಿಕ್ಷಕರಿಗೆ ವರ್ಗ ಸಂಕಷ್ಟ

Monday, 16.07.2018, 3:05 AM       No Comments

| ವಿಲಾಸ ಮೇಲಗಿರಿ

ಬೆಂಗಳೂರು: ಅರ್ಜಿ ಗುಜರಾಯಿಸಿ ಎರಡು ವರ್ಷಗಳಿಂದ ವರ್ಗಾವಣೆಯ ಕನಸು ಕಾಣುತ್ತಿರುವ ರಾಜ್ಯದ ಶಿಕ್ಷಕ ವರ್ಗದ ಆಸೆ ಈ ವರ್ಷವೂ ಕಮರುವ ಸಾಧ್ಯತೆ ನಿಚ್ಚಳವಾಗತೊಡಗಿದೆ.

ಶಿಕ್ಷಕ-ವಿದ್ಯಾರ್ಥಿ ಅನುಪಾತ, ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿನ ಗೋಜಲು, ಪತಿ-ಪತ್ನಿ ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳಿರುವ ಶಿಕ್ಷಕರ ವರ್ಗಾವಣೆಗೆ ಇರುವ ಕಾನೂನು ಕಗ್ಗಂಟುಗಳು ಅರ್ಜಿ ಸಲ್ಲಿಸಿರುವ 70 ಸಾವಿರ ಶಿಕ್ಷಕರಲ್ಲಿ ತಳಮಳ ತಂದಿದೆ.

ಶಿಕ್ಷಕ-ವಿದ್ಯಾರ್ಥಿ ಅನುಪಾತ ಕಡಿಮೆ ಮಾಡುವುದಾಗಿ ಹಿಂದಿನ ಸಿದ್ದರಾಮಯ್ಯ ಸರ್ಕಾರ ಭರವಸೆ ನೀಡಿತ್ತು. ಈ ಸಂಬಂಧ ಶಿಕ್ಷಣ ಇಲಾಖೆಯಲ್ಲಿ ನಡಾವಳಿ ಆಗಿದ್ದರೂ ಕಾಯ್ದೆಗೆ ತಿದ್ದುಪಡಿ ಆಗಿಲ್ಲ. ಹಾಗಾಗಿ ಹಳೆಯ ಅನುಪಾತ ಪದ್ಧತಿಗೇ ಸರ್ಕಾರ ಜೋತುಬೀಳಬೇಕಿದೆ.

ಇನ್ನು ನೇರವಾಗಿ ಸಾಮಾನ್ಯ ವರ್ಗಾವಣೆ ಮಾಡುವಂತಿಲ್ಲ. ಮೊದಲು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆಗಬೇಕು. ನಂತರ 10 ವರ್ಷ ಕಾರ್ಯ ನಿರ್ವಹಿಸಿದವರ ಕಡ್ಡಾಯ ವರ್ಗಾವಣೆ ಮಾಡಬೇಕು. ಅದಾದ ತರುವಾಯ ಸಾಮಾನ್ಯ ವರ್ಗಾವಣೆ ಮಾಡಬೇಕೆಂಬುದು ಕಾನೂನು. ಈ ಮೂರು ಪ್ರಕ್ರಿಯೆ ಮುಗಿಯುವಷ್ಟರಲ್ಲೇ ಅರ್ಧ ಶೈಕ್ಷಣಿಕ ವರ್ಷ ಪೂರ್ಣಗೊಂಡಿರುತ್ತದೆ.

ಅರ್ಧ ವರ್ಷದಲ್ಲಿ ವರ್ಗಾವಣೆ ಮಾಡಿದರೆ ಮಕ್ಕಳ ಕಲಿಕೆಗೆ ತೊಂದರೆ ಆಗುತ್ತದೆ ಎಂದು ಪಾಲಕರು ಗಲಾಟೆ ಮಾಡಿದರೆ ಸರ್ಕಾರ ಮಣಿಯಲೇಬೇಕಾಗುತ್ತದೆ. ಈ ಅಂಶವೂ ಶಿಕ್ಷಕರ ಆತಂಕವನ್ನು ಇಮ್ಮಡಿಸಿದೆ.

ಹೊಸ ಅರ್ಜಿಗೆ ಒತ್ತಡ

ಈಗ ಸರ್ಕಾರ ಮಾಡಹೊರಟಿರುವ ವರ್ಗಾವಣೆ 2 ವರ್ಷದ ಹಿಂದಿನ ಅರ್ಜಿ ಆಧಾರದಲ್ಲಿ. ಆದರೆ, ಆಗ ಐದು ವರ್ಷ ಪೂರೈಸದವರು ಈಗ ಅರ್ಜಿ ಹಾಕಲು ಅರ್ಹರಾಗಿದ್ದಾರೆ. ಈ ವರ್ಗಾವಣೆಯಲ್ಲೇ ತಮಗೂ ಅರ್ಜಿ ಹಾಕಲು ಅವಕಾಶ ಮಾಡಿಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಈ ನೌಕರರ ಪರವಾಗಿ ಕೆಲ ಸಚಿವರು, ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ. ಹೊಸದಾಗಿ ಅರ್ಜಿ ಹಾಕಲು ಅವಕಾಶ ಕೊಟ್ಟರೆ ವರ್ಗಾವಣೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿ ಅಕ್ಟೋಬರ್​ವರೆಗೆ ನಡೆದರೂ ಅಚ್ಚರಿಪಡಬೇಕಿಲ್ಲ.

ಶಿಕ್ಷಕರು ವರ್ಗಾವಣೆಯಲ್ಲಿ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಕ್ಷಣ ವರ್ಗಾವಣೆ ಭಾಗ್ಯ ಕೊಡಬೇಕು. ಇಲ್ಲದಿದ್ದರೆ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮವಾಗುತ್ತದೆ.

| ಅರುಣ ಶಹಾಪುರ ವಿಧಾನ ಪರಿಷತ್ ಸದಸ್ಯ

ವರ್ಗಕ್ಕೇನು ಕಂಟಕ?

# ಮೊದಲು ಹೆಚ್ಚುವರಿ ಶಿಕ್ಷಕರು, ಬಳಿಕ 10 ವರ್ಷ ಸೇವೆ ಸಲ್ಲಿಸಿದವರ ವರ್ಗ ನಡೆಯಬೇಕು. ಆ ನಂತರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು

# ಈ ಮೂರು ಪ್ರಕ್ರಿಯೆ ಪೂರ್ಣಗೊಳ್ಳುವಷ್ಟರಲ್ಲೇ ವರ್ಷಪೂರ್ತಿಯಾಗುತ್ತದೆ

# ಉಳಿದ ಅರ್ಧ ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆ ಮಾಡಿದರೆ ಮಕ್ಕಳ ಕಲಿಕೆಗೆ ತೊಂದರೆ ಎಂದು ಪಾಲಕರು ಆಕ್ಷೇಪ ತೆಗೆಯುತ್ತಾರೆ

# 2 ವರ್ಷದ ಹಿಂದೆ ಅರ್ಜಿ ಕರೆದಾಗ ಐದು ವರ್ಷ ಸೇವೆ ಪೂರ್ಣಗೊಳಿಸದವರು ಈಗ ಆ ಅರ್ಹತೆ ಪಡೆದಿದ್ದಾರೆ. ತಮಗೂ ಅಟ1ವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಮುಚ್ಚುವ ಶಾಲೆ ಶಿಕ್ಷಕರು ಎಲ್ಲಿಗೆ?

ವಿದ್ಯಾರ್ಥಿಗಳಿಲ್ಲದ 28 ಸಾವಿರ ಶಾಲೆಗಳನ್ನು ಸಮೀಪದ 8,500 ಶಾಲೆಗಳಿಗೆ ವಿಲೀನಗೊಳಿಸುವುದಾಗಿ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಹೇಳಿ ಅನುಮೋದನೆ ಪಡೆದುಕೊಂಡಿದೆ. ಈ ಶಾಲೆಗಳಲ್ಲಿ ಸುಮಾರು 35-37 ಸಾವಿರ ಶಿಕ್ಷಕರಿದ್ದು, ಅವರನ್ನು ಈಗ ನಡೆಯಲಿರುವ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಸೇರಿಸುತ್ತಾರೋ, ಪ್ರತ್ಯೇಕ ಹೆಚ್ಚುವರಿ ವರ್ಗಾವಣೆ ಮಾಡುತ್ತಾರೋ ಎಂಬುದು ಇನ್ನೂ ಸ್ಪಷ್ಟತೆಯಿಲ್ಲ. ಪ್ರತ್ಯೇಕವಾಗಿ ಮಾಡಲು ಹೊರಟರೆ ಅದು ಈ ವರ್ಷ ಆಗದ ಮಾತು ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.

ಹೈಕ, ಬೆಳಗಾವಿಯಲ್ಲೇ ಹೆಚ್ಚು

ಶೇ.20ಕ್ಕಿಂತ ಹೆಚ್ಚು ಹುದ್ದೆ ಖಾಲಿ ಇದ್ದರೆ ಅಂತಹ ತಾಲೂಕಿನಿಂದ ವರ್ಗಾವಣೆ ಮಾಡುವಂತಿಲ್ಲ. ಆದರೆ, ಅಂತಹ ತಾಲೂಕಿನಿಂದಲೇ ಹೆಚ್ಚು ಅರ್ಜಿ ಬಂದಿವೆ. ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೇ ವರ್ಗಾವಣೆ ಕೋರಿ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಖಾನಾಪುರ, ಕಾಗವಾಡ, ರಾಯಭಾಗ, ಅಥಣಿ, ನಿಪ್ಪಾಣಿ, ಬೆಳಗಾವಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ಹೊರ ಹೋಗಲು ಶಿಕ್ಷಕರು ತುದಿಗಾಲಲ್ಲಿದ್ದಾರೆ.

ನಿಗದಿತ ಮಿತಿ ಮುಟ್ಟಲ್ಲ

ಶಿಕ್ಷಕರ ವರ್ಗಾವಣೆಗೆ ಬೆಟ್ಟದಷ್ಟು ಬೇಡಿಕೆ ಇದ್ದರೂ ಕಾನೂನು ಕಗ್ಗಂಟಿನಿಂದ ಎಂದೂ ನಿಗದಿತ ಮಿತಿ ತಲುಪುವುದಿಲ್ಲ. ‘ಸಿ’ ವಲಯದ ಶಿಕ್ಷಕರು ನಗರ/ನಗರದ ಸಮೀಪಕ್ಕೆ ಬರಲು ಉತ್ಸುಕರಾಗಿರುತ್ತಾರೆ. ಆದರೆ, ನಗರ/ಪಟ್ಟಣದಲ್ಲಿರುವವರು ಹಳ್ಳಿಯ ಕಡೆಗೆ ಮುಖ ಮಾಡುವುದಿಲ್ಲ. ಹಾಗಾಗಿ ಈಗಿರುವ ಶೇ.15 ಮಿತಿ ಅಲ್ಲ, ಹಿಂದೆಂದೂ ನಿಗದಿತ ಶೇಕಡಾವಾರು ಮಿತಿ ಮುಟ್ಟಿಲ್ಲ.ಈ ಬಾರಿ ಶೇ.15 ರ ಅನ್ವಯ 27 ರಿಂದ 28 ಸಾವಿರ ಶಿಕ್ಷಕರ ವರ್ಗಾವಣೆ ಆಗಬೇಕು. ಆದರೆ, ಅಷ್ಟು ಸಂಖ್ಯೆ ವರ್ಗಾವಣೆ ಕನಸಿನ ಮಾತು!

ವರ್ಗಕ್ಕೆ ಸುಗ್ರೀವಾಜ್ಞೆ

ಈಗಿರುವ ವರ್ಗಾವಣೆ ಒತ್ತಡ, ಕಾನೂನು ಗೋಜಲಿನಿಂದ ಪರಿಹಾರ ಕಾಣಲು ತಾತ್ಕಾಲಿಕ ಸುಗ್ರೀವಾಜೆ ಮೂಲಕ ವರ್ಗ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂಬ ಬೇಡಿಕೆಯೂ ಸರ್ಕಾರಕ್ಕೆ ಬಂದಿದೆ. ಒಂದು ಬಾರಿ ಈ ಅವಕಾಶ ಕೊಟ್ಟು ಸಮಸ್ಯೆ ಪರಿಹರಿಸಬೇಕು ಎಂಬ ವಾದವೂ ಬಲವಾಗಿ ಕೇಳಿ ಬರುತ್ತಿದೆ. ಹಾಗೆ ಮಾಡಿದರೆ, ಹೈದರಾಬಾದ್ ಕರ್ನಾಟಕ ಮತ್ತು ಬೆಳಗಾವಿ ವಿಭಾಗದಲ್ಲಿ ಬಹಳಷ್ಟು ಹುದ್ದೆ ಖಾಲಿ ಆಗುತ್ತವೆ ಎಂಬ ಇನ್ನೊಂದು ವಾದವೂ ಇದೆ.

ಸುಗ್ರಿವಾಜ್ಞೆ ಹೊರಡಿಸಿ ವರ್ಗಾವಣೆ ಮಾಡಿ ಖಾಲಿಯಾಗುವ ಸ್ಥಾನಗಳಿಗೆ 371(ಜೆ) ಅಡಿ ನೇಮಕ ಮಾಡಬೇಕು. ಆಗ ಹೈದರಾಬಾದ್ ಕರ್ನಾಟಕಕ್ಕೂ ನ್ಯಾಯ ಒದಗಿಸಿದಂತಾಗುತ್ತದೆ. ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂಬ ಮಾತೂ ಮುನ್ನೆಲೆಗೆ ಬಂದಿದೆ.

ವಿಷಯವಾರು ಶಿಕ್ಷಕರ ಸಮಸ್ಯೆ

ವಿಷಯವಾರು ಶಿಕ್ಷಕರನ್ನು ವರ್ಗಾವಣೆ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದರೆ, ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ.

ಪತಿ-ಪತ್ನಿ ವರ್ಗಾವಣೆ ಗೋಜಲು?

ಸಾಮಾನ್ಯ ವರ್ಗಾವಣೆಯಲ್ಲಿ ಪತಿ-ಪತ್ನಿ ಒಂದೆಡೆ ತರಲು ಅವಕಾಶವಿದೆ. ಅದೇ ರೀತಿ ಆರೋಗ್ಯ ಸಮಸ್ಯೆ ಇದ್ದಲ್ಲಿ ‘ಎ’ ವಲಯಕ್ಕೆ ಬರಬಹುದು ಎಂದು ಕಾನೂನಿನಲ್ಲಿದೆ. ವಿಚಿತ್ರವೆಂದರೆ, ಒಂದೇ ಸ್ಥಳದಲ್ಲಿ 10 ವರ್ಷ ಸೇವೆ ಸಲ್ಲಿಸಿದರೆ ಅಂತಹವರನ್ನು ಕಡ್ಡಾಯ ವರ್ಗಾವಣೆ ಕಾಯ್ದೆಯಡಿ ವರ್ಗಾವಣೆ ಮಾಡಲಾಗುತ್ತದೆ. ಕಾಯ್ದೆಯಲ್ಲಿನ ಇಂತಹ ಲೋಪ ಬಳಸಿಕೊಂಡು ಶಿಕ್ಷಕರು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

Back To Top