11 ಐಪಿಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ: ರಾಮನಗರಕ್ಕೆ ಅನೂಪ್​ ಶೆಟ್ಟಿ ಎಸ್​ಪಿ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಬದಲಾವಣೆಯಾಗಿದ್ದು ಒಟ್ಟು 11 ಐಪಿಎಸ್​ ಅಧಿಕಾರಿಗಳನ್ನು ದಿಢೀರ್​ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರು ಪೊಲೀಸ್​ ಆಯುಕ್ತ ಮತ್ತು ಡಿಐಜಿಪಿ ಎಸ್​ಪಿ ಸಂದೀಪ್​ ಪಾಟೀಲ್​ ಅವರನ್ನು ಸಿಸಿಬಿ ಜಂಟಿ ಪೊಲೀಸ್​ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದ್ದು ಬೆಂಗಳೂರು ಗುಪ್ತಚರ ಐಜಿಪಿ ಬಿ.ದಯಾನಂದ್​ ಅವರನ್ನು ಕೆಎಸ್​ಆರ್​ಪಿಗೆ ವರ್ಗಾಯಿಸಲಾಗಿದೆ.

ರಾಮನಗರ ಎಸ್​ಪಿ ಆಗಿದ್ದ ಚೇತನ್​ ಸಿಂಗ್​ ರಾಥೋಡ್​ ಅವರನ್ನು ಬೆಂಗಳೂರು ಕೇಂದ್ರ ವಲಯ ಡಿಸಿಪಿಯನ್ನಾಗಿ ವರ್ಗಾವಣೆ ಮಾಡಿದ್ದು ಸದ್ಯ ರಾಮನಗರ ಎಸ್​ಪಿಯಾಗಿ ಅಪರಾಧ ತನಿಖಾ ವಿಭಾಗದ ಎಸ್​ಪಿಯಾಗಿದ್ದ ಅನೂಪ್​ ಶೆಟ್ಟಿ ನೇಮಕಗೊಂಡಿದ್ದಾರೆ.

ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ಹನುಮಂತ ರಾಯ್ ದಾವಣಗೆರೆ ಎಸ್​ಪಿಯಾಗಿ, ರಾಜ್ಯ ಮಾನವ ಹಕ್ಕು ಆಯೋಗದ ಎಡಿಜಿಪಿಯಾಗಿದ್ದ ಅಮರ್​ ಕುಮಾರ್​ ಪಾಂಡೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿಯಾಗಿ, ಈ ವಿಭಾಗದಲ್ಲಿ ಎಡಿಜಿಪಿಯಾಗಿದ್ದ ಕಮಲ್​ ಪಂಥ್ ಅವರನ್ನು ಗುಪ್ತಚರ ವಿಭಾಗದ ಎಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಹಾಗೇ ಅಪರಾಧ ತನಿಖೆ ಮತ್ತು ಆರ್ಥಿಕ ಅಪರಾಧ ವಿಭಾಗದ ಐಜಿಪಿಯಾಗಿದ್ದ ಎಂ.ಚಂದ್ರಶೇಖರ್​ ಅವರನ್ನು ಎಸಿಬಿ ಐಜಿಪಿಯಾಗಿ, ಪೊಲೀಸ್​ ಅಗ್ನಿಶಾಮಕ ದಳದ ಡಿಐಜಿಪಿ ಸಿದ್ದರಾಮಪ್ಪ ಅವರನ್ನು ಸಾರ್ವಜನಿಕ ಮತ್ತು ಸಂಪರ್ಕ ಇಲಾಖೆ ಆಯುಕ್ತರನ್ನಾಗಿ, ಬೆಂಗಳೂರು ನಗರ ಗುಪ್ತಚರ ಡಿಸಿಪಿ ಕೆ.ಎಂ.ಶಾಂತರಾಜು ಅವರನ್ನು ಶಿವಮೊಗ್ಗ ಎಸ್​ಪಿಯನ್ನಾಗಿ, ಬೆಂಗಳೂರು ಗುಪ್ತಚರ ಡಿಐಜಿಪಿಯಾಗಿದ್ದ ಎ.ಸುಬ್ರಹ್ಮಣ್ಯೇಶ್ವರ್​ ರಾವ್​ ಅವರನ್ನು ಮಂಗಳೂರು ನಗರ ಪೊಲೀಸ್​ ಆಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಚೇತನ್​ ಸಿಂಗ್​ ರಾಥೋಡ್​ ಅವರನ್ನು ಜೂ.7ರಂದು ರಾಮನಗರ ಎಸ್​ಪಿಯನ್ನಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ನೇಮಕ ಮಾಡಿತ್ತು. ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಅವರನ್ನು ಬದಲಿಸಿ ಅನೂಪ್​ ಶೆಟ್ಟಿಯವರನ್ನು ಆಸ್ಥಾನಕ್ಕೆ ವರ್ಗಾವಣೆ ಮಾಡಿದೆ. ಅನೂಪ್​ ಶೆಟ್ಟಿಯವರು ಖಡಕ್​ ಅಧಿಕಾರಿ ಎಂದೇ ಹೆಸರು ಮಾಡಿದ್ದು, ಮಾಜಿ ಸಿಎಂ ಸ್ವಕ್ಷೇತ್ರಕ್ಕೆ ಅವರನ್ನು ಎಸ್​​ಪಿಯನ್ನಾಗಿ ನೇಮಿಸಿದ್ದು ಬಿಜೆಪಿಯ ಮಾಸ್ಟರ್​ ಪ್ಲ್ಯಾನ್​ ಎಂದೇ ಹೇಳಲಾಗುತ್ತಿದೆ.