ಬೆಂಗಳೂರು: ಡಿಸಿಎಂ ಆಪ್ತ ಕಾರ್ಯದರ್ಶಿಯವರ ಸ್ನೇಹಿತನ ಹೆಸರಿನಲ್ಲಿ ಸರ್ಕಾರಿ ನೌಕರರಿಗೆ ಕರೆ ಮಾಡಿ, ವರ್ಗಾವಣೆ ಮಾಡಿಸಿಕೊಡುವುದಾಗಿ ಆಮಿಷವೊಡ್ಡಿ ಹಣ ಪಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ವಿಧಾನಸೌಧ 3ನೇ ಮಹಡಿ ಡಿಸಿಎಂ ಆಪ್ತ ಕಾರ್ಯದರ್ಶಿ ಡಾ.ಎಂ.ಎಸ್. ರಾಜೇಂದ್ರ ಪ್ರಸಾದ್ ವಿಧಾನಸೌಧ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ, ಮೇ 20 ರಿಂದ ಈ ತಿಂಗಳ 4ರ ನಡುವೆ ಸರ್ಕಾರಿ ನೌಕರರ ಮೊಬೈಲ್‌ಗೆ ಕರೆ ಮಾಡಿ, ‘ನಾನು ಡಿಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಡಿಸಿಎಂ ಆಪ್ತ ಕಾರ್ಯದರ್ಶಿಗೆ ಆಪ್ತನಾಗಿದ್ದು, ಅವರಿಂದ ನಿಮ್ಮ ವರ್ಗಾವಣೆಗಳನ್ನು ನೀವು ಕೇಳಿದ ಸ್ಥಳಕ್ಕೆ ಮಾಡಿಸಿಕೊಡುತ್ತೆನೆ. ಅದಕ್ಕೆ ಇಂತಿಷ್ಟು ಹಣ ಕೊಡಬೇಕಾಗುತ್ತದೆ’ ಎಂದು ಹೇಳುತ್ತಿದ್ದ.
ಜತೆಗೆ ಸಾರ್ವಜನಿಕರಿಗೂ ಕರೆ ಮಾಡಿ ಸರ್ಕಾರದ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ ಅವರ ಬಳಿಯೂ ಹಣ ವಸೂಲಿ ಮಾಡಿರುವುದು ಕಂಡುಬಂದಿದೆ. ಈತನನ್ನು ಪತ್ತೆಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಒತ್ತಾಯ ಮಾಡಿದ್ದಾರೆ.