ಗೋಕಾಕ: ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಶುಕ್ರವಾರ 12 ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು 28 ಜನರಿಗೆ ಸೋಂಕು ತಗುಲಿದ್ದು ಮೂವರು ಸಾವನ್ನಪ್ಪಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ.
ಗೋಕಾಕ ನಗರ-2, ತಾಲೂಕಿನ ಕೌಜಲಗಿ-7, ರಾಜಾಪುರ-1, ದುರದುಂಡಿ-1 ಹಾಗೂ ಮೂಡಲಗಿ ಪಟ್ಟಣದಲ್ಲಿ 1 ಸೇರಿ 12 ಜನರಿಗೆ ಸೋಂಕು ದೃಢಪಟ್ಟಿದೆ. ನಗರದ ಕುರುಬರೂಲ್ ಹತ್ತಿರವಿರುವ ಓಣಿಯಲ್ಲಿ ಅಸ್ತಮಾದಿಂದ ಬಳಲುತ್ತಿದ್ದ 48 ವರ್ಷದ ಮಹಿಳೆ ಚಿಕಿತ್ಸೆ ಲಕಾರಿಯಾಗದೇ 10 ದಿನಗಳ ಹಿಂದೆ ಮೃತಪಟ್ಟಿದ್ದಳು. ಈಗ ವರದಿ ಬಂದಿದ್ದು, ಕರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬೇಡ್ಕರ್ ನಗರದ 64 ವರ್ಷದ ವೃದ್ಧನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸ ಲಾಗಿತ್ತು. ಅವರಿಗೂ ಸೋಂಕು ತಗುಲಿರುವುದು ದೃಢವಾಗಿದೆ. ಕೌಜಲಗಿಯಲ್ಲಿ ಕೆಲ ದಿನಗಳ ಹಿಂದೆ ಕರೊನಾ ದೃಢಪಟ್ಟಿದ್ದ 8 ವರ್ಷದ ಬಾಲಕಿಯ ಪ್ರಾಥಮಿಕ ಸಂಪರ್ಕ ದಲ್ಲಿದ್ದ 33 ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸ ಲಾಗಿತ್ತು. ಅದರಲ್ಲಿ 7 ಜನರಿಗೆ ಸೋಂಕು ದೃಢಪಟ್ಟಿದೆ. ದುರದುಂಡಿ ಗ್ರಾಮದ ಪ್ರಕರಣ ಪ್ರಾಥಮಿಕ ಸಂಪರ್ಕದಿಂದ ಬಂದಿದೆ. ರಾಜಾಪುರದ ಆರ್‌ಎಂಪಿ ವೈದ್ಯನಿಗೆ ಸೋಂಕು ತಗುಲಿದ್ದು, ಯಾವ ಮೂಲದಿಂದ ದೃಢಪಟ್ಟಿದೆ ಎಂದು ತಿಳಿದುಬಂದಿಲ್ಲ ಎಂದು ಜಿಂಗಿ ತಿಳಿಸಿದ್ದಾರೆ.