ರೈಲು ದುರಂತ ತಪ್ಪಿಸಿದ ಯುವಕರು: ಸಾಹಸಕ್ಕೆ ಮೆಚ್ಚಿದ ರೈಲ್ವೆ ಅಧಿಕಾರಿಗಳು

ಬೆಳಗಾವಿ: ಇಬ್ಬರು ಯುವಕರ ಸಮಯಪ್ರಜ್ಞೆಯಿಂದ ಭಾರಿ ರೈಲು ದುರಂತವೊಂದು ತಪ್ಪಿ, ಸಾವಿರಾರು ಜನರ ಪ್ರಾಣ ಉಳಿದಿದೆ.

ರಿಯಾಜ್​ ಹಾಗೂ ತೋಫಿಕ್​ ಎಂಬುವರು ಖಾನಾಪುರ ಪಟ್ಟಣದ ಗಾಂಧಿನಗರದ ಬಳಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಅಲ್ಲಿ ಹಾದು ಹೋಗಿರುವ ರೈಲ್ವೆ ಹಳಿ ಮೇಲೆ ಮರ ಬಿದ್ದಿರುವುದನ್ನು ನೋಡಿದರು. ತಕ್ಷಣವೇ ಎಚ್ಚೆತ್ತುಕೊಂಡ ಅವರು, ಚಲಿಸುತ್ತಿದ್ದ ರೈಲಿನ ವಿರುದ್ಧ ದಿಕ್ಕಿನಲ್ಲಿ ಹಳಿ ಮೇಲೆ ಓಡುತ್ತ ಚಾಲಕನಿಗೆ ರೈಲು ನಿಲ್ಲಿಸುವಂತೆ ಸೂಚನೆ ಮಾಡಿದ್ದಾರೆ. ಆ ಯುವಕರನ್ನು ನೋಡಿದ ನೋಡಿದ ಚಾಲಕ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ.

ರೈಲು ಕೊಲ್ಲಾಪುರದಿಂದ ಹುಬ್ಬಳ್ಳಿಗೆ ಸಂಚರಿಸುತ್ತಿತ್ತು. ಸುಮಾರು 1500 ಪ್ರಯಾಣಿಕರು ಇದ್ದರು. ಯುವಕರ ಸಮಯಪ್ರಜ್ಞೆಯನ್ನು ನೈಋತ್ಯ ರೈಲ್ವೆ ಅಧಿಕಾರಿಗಳು ಶ್ಲಾಘಿಸಿದ್ದಾರೆ.