ಅಜ್ಜಂಪುರ ರೈಲು ನಿಲ್ದಾಣಕ್ಕೆ ಬೇಕು ಸೌಲಭ್ಯ

ಅಜ್ಜಂಪುರ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಅಜ್ಜಂಪುರವೇ ಕೇಂದ್ರ ಸ್ಥಾನ. ಶೈಕ್ಷಣಿಕ, ಆರ್ಥಿಕವಾಗಿ ಪ್ರಬಲವಾಗುತ್ತಿದ್ದು, ಪ್ರತಿದಿನ ಎರಡು ಸಾವಿರಕ್ಕೂ ಅಧಿಕ ಪ್ರಯಾಣಿಕರು ಬೆಂಗಳೂರು, ದಾವಣಗೆರೆ ಮತ್ತಿತರೆ ಕಡೆ ಪ್ರಯಾಣಿಸುತ್ತಾರೆ. ಆದರೆ ನಿಲ್ದಾಣದಲ್ಲಿ ಶೌಚಗೃಹ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ ವ್ಯವಸ್ಥೆ ಇಲ್ಲ. ನೆರಳಿನ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಬಿಸಿಲಲ್ಲೇ ನಿಂತು ರೈಲಿಗಾಗಿ ಕಾಯಬೇಕಿದೆ. ಹಾಗಾಗಿ ಮೇಲ್ಛಾವಣಿ ಮತ್ತು ಕೂರಲು ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ದಾವಣಗೆರೆ ಕಡೆ ಸಂಚರಿಸಲು ಬೆಳಗಿನ ಜಾವ 4ರಿಂದ ಮಧ್ಯಾಹ್ನ 12 ಗಂಟೆವರೆಗೆ ಯಾವುದೆ ರೈಲುಗಳ ನಿಲುಗಡೆಯಿಲ್ಲ. ಇದರಿಂದ ಬೆಂಗಳೂರಿನಿಂದ ದಾದರ್ ತಲುಪುವ ದಾದರ್-ಯಶವಂತಪುರ ಎಕ್ಸ್​ಪ್ರೆಸ್ ರೈಲು ಅಜ್ಜಂಪುರದಲ್ಲಿ ಬೆಳಗ್ಗೆ 10.30ಕ್ಕೆ ಬರಲಿದೆ. ಅಲ್ಲದೆ ಧಾರವಾಡ-ಮೈಸೂರು ರೈಲು ಇವೆರಡನ್ನೂ ಅಜ್ಜಂಪುರದಲ್ಲಿ ನಿಲುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಜ್ಜಂಪುರ ರೈಲ್ವೆ ನಿಲ್ದಾಣದ ಸಮೀಪ ಖಾಲಿ ಇರುವ ಜಾಗದಲ್ಲಿ ಗಿಡ ಮರಗಳನ್ನು ಬೆಳೆಸಿ ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಅಜ್ಜಂಪುರದಿಂದ ಹೊಸದುರ್ಗ ಹೋಗಲು ರೈಲ್ವೆ ಹಳಿ ದಾಟಬೇಕು. ಇಲ್ಲಿ ಲೆವೆಲ್ ಕ್ರಾಸಿಂಗ್ ಇರುವುದರಿಂದ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ವಿುಸಬೇಕು ಎಂದು ಆಗ್ರಹಿಸಿದ್ದಾರೆ