ಚಲಿಸುತ್ತಿದ್ದಾಗಲೇ ಸೇತುವೆ ಕುಸಿದು ಉರುಳಿಬಿದ್ದ ರೈಲು: ನಾಲ್ವರು ಸಾವು ನೂರಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಢಾಕಾ: ಕಾಲುವೆಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿದು ಚಲಿಸುತ್ತಿದ್ದ ರೈಲು ಕಾಲುವೆಗೆ ಉರುಳಿಬಿದ್ದು, ನಾಲ್ವರು ಸಾವಿಗೀಡಾಗಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದಲ್ಲಿ ಸೋಮವಾರ ನಡೆದಿದೆ.

ಸೇತುವೆ ಮೇಲೆ ಎಕ್ಸ್​ಪ್ರೆಸ್​ ರೈಲು ಚಲಿಸುವಾಗ ಇದ್ದಕ್ಕಿದ್ದಂತೆ ಸೇತುವೆಯ ಒಂದು ಭಾಗ ಕುಸಿದ ಪರಿಣಾಮ ರೈಲು ಉರುಳಿಬಿದ್ದಿದೆ. ಬಾಂಗ್ಲಾ ರಾಜಧಾನಿ ಢಾಕಾದಿಂದ 300 ಕಿ.ಮೀ. ದೂರವಿರುವ ಕಲೌರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಅನೇಕ ಪ್ರಯಾಣಿಕರು ರೈಲಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ಹಾಗೂ ಪೊಲೀಸ್​ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮೃತ ದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ಗಾಯಗೊಂಡಿರುವ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗಳಿಗೆ ರವಾನಿಸಲಾಗುತ್ತಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ರಶಿದುಲ್​ ಹಸನ್​ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ 21 ಗಾಯಾಳುಗಳನ್ನು ಸಮೀಪವಿರುವ ಸೈಲ್ಹೆಟ್ ನಗರದ​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಯಿಂದಾಗಿ ಢಾಕಾದಿಂದ ಈಶಾನ್ಯ ಭಾಗಗಳ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಕಳಪೆ ಸಿಗ್ನಲ್​ ಹಾಗೂ ರನ್​ಡೌನ್​ ಟ್ರ್ಯಾಕ್​ಗಳಿಂದ ಬಾಂಗ್ಲಾದೇಶದಲ್ಲಿ ರೈಲು ಅಪಘಾತಗಳು ಸಾಮಾನ್ಯವಾಗಿವೆ. (ಏಜೆನ್ಸೀಸ್​​)

Leave a Reply

Your email address will not be published. Required fields are marked *