ಸಿಡಿಲಿಗೆ ಹೆದರಿ ಓಡಿದಾಗ ರೈಲು ಡಿಕ್ಕಿ ಹೊಡೆದು ಯುವಕ ಸಾವು

ಉಳ್ಳಾಲ: ಸಿಡಿಲು, ಮಿಂಚಿಗೆ ಹೆದರಿದ ಯುವಕರಿಬ್ಬರು ತರಾತುರಿಯಲ್ಲಿ ತೊಕ್ಕೊಟ್ಟು ಒಳಪೇಟೆಯಲ್ಲಿ ರೈಲು ಹಳಿ ದಾಟುತ್ತಿದ್ದ ಸಂದರ್ಭ ರೈಲು ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದರೆ, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ.

ಹಾವೇರಿ ಜಿಲ್ಲೆಯ ಆನೇಕಲ್ಲು ಹುಣಸಿ ಗ್ರಾಮದ ನಿವಾಸಿ ಸುಭಾಷ್(24) ಸಾವನ್ನಪ್ಪಿದ್ದು, ಆತನ ಜತೆಯಲ್ಲಿದ್ದ ಮಂಜುನಾಥ್(26) ಕಾಲು ತುಂಡಾಗಿದೆ. ಗುರುವಾರ ಸಾಯಂಕಾಲ ಕೆಲಸ ಮುಗಿಸಿ ಬರುತ್ತಿದ್ದ ಯುವಕರು ತೊಕ್ಕೊಟ್ಟು ಒಳಪೇಟೆ ರೈಲು ಹಳಿಬಳಿ ತಲುಪಿದಾಗ ಜೋರಾದ ಮಳೆ, ಸಿಡಿಲು, ಮಿಂಚು ಬಂದಿದೆ. ಇದರಿಂದ ಗಾಬರಿಗೊಂಡ ಯುವಕರು ಬೇಗನೆ ಮನೆ ಸೇರುವ ತವಕದಲ್ಲಿ ತರಾತುರಿಯಲ್ಲಿ ರೈಲು ಹಳಿ ದಾಟಲು ಮುಂದಾದಾಗ ರೈಲು ಡಿಕ್ಕಿ ಹೊಡೆದಿದೆ.

ಈ ಭಾಗದಲ್ಲಿ ವ್ಯಾಪಾರಿಗಳು, ಸಾರ್ವಜನಿಕರು, ಆಟೋಗಳಿದ್ದು, ಜನರ ಓಡಾಟವೂ ಹೆಚ್ಚಾಗಿರುತ್ತದೆ. ರೈಲು ಬರುವ ಸಂದರ್ಭ ಹಳಿ ದಾಟದಂತೆ ವ್ಯಾಪಾರಿಗಳೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾರೆ. ಆದರೆ ಗುರುವಾರ ಸಂಜೆ ಮಳೆ, ಸಿಡಿಲು ಇದ್ದ ಕಾರಣ ರೈಲು ಬರುವುದಾಗಲಿ, ಯುವಕರು ಹಳಿ ದಾಟುವ ಬಗ್ಗೆಯಾಗಲಿ ಯಾರೂ ಗಮನಿಸಿರಲಿಲ್ಲ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಿಡಿಲು ಬಡಿದು ಮನೆಗೆ ಹಾನಿ
ಬಂಟ್ವಾಳ ತಾಲೂಕಿನ ಬಂಟ್ವಾಳ ಕಸಬಾ ಗ್ರಾಮದ ಕಡಂಬಳಿಕೆ ಎಂಬಲ್ಲಿ ದೇಜಪ್ಪ ಪೂಜಾರಿ ಎಂಬುವರ ಮನೆಗೆ ಗುರುವಾರ ಸಾಯಂಕಾಲ ಸಿಡಿಲು ಬಡಿದು ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *