ಸಂಪಾದಕೀಯ | ಆಘಾತಕಾರಿ ದುರಂತ

Ahmedabad Plane Crash

ಗುಜರಾತಿನ ಅಹಮದಾಬಾದ್​ನಿಂದ ಲಂಡನ್​ಗೆ ಹೋಗುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ ಡ್ರೀಮ್ ಲೈನರ್ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಗುರುವಾರ ಮಧ್ಯಾಹ್ನ ಭೀಕರ ಅಪಘಾತಕ್ಕೆ ತುತ್ತಾಗಿದೆ. ವಿಮಾನ ಅಪ್ಪಳಿಸಿದ ಕಟ್ಟಡದಲ್ಲೂ ಹಲವು ಸಾವು-ನೋವು ಸಂಭವಿಸಿವೆ. ಬೆಂಕಿಯ ಕೆನ್ನಾಲಿಗೆ ಹರಡಿಕೊಂಡ ರೀತಿ ಭಯಾನಕವಾಗಿತ್ತು. ರಸ್ತೆಯಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದ ದಾರುಣ ದೃಶ್ಯಗಳು ಅಪಘಾತದ ಭೀಕರತೆಗೆ ಸಾಕ್ಷಿ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಘಟನೆಗೆ ಶೋಕ ವ್ಯಕ್ತಪಡಿಸಿದ್ದಾರೆ. ಬ್ರಿಟನ್, ಜರ್ಮನಿ, ರಷ್ಯಾ, ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದಲ್ಲದೆ, ಸಂತ್ರಸ್ತರಿಗಾಗಿ ಮಿಡಿದಿದ್ದಾರೆ. ದುಃಖದ ಸಂದರ್ಭದಲ್ಲಿ ಭಾರತದ ಜತೆ ನಿಲ್ಲುವುದಾಗಿ ತಿಳಿಸಿದ್ದಾರೆ. ಮೃತರಲ್ಲಿ ಭಾರತ, ಬ್ರಿಟನ್, ಪೋರ್ಚುಗೀಸ್ ಮತ್ತು ಕೆನಡಾದ ಪ್ರಜೆಗಳು ಸೇರಿದ್ದಾರೆ. ಗುಜರಾತ್​ನ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ವಿಜಯ್ ರೂಪಾಣಿ ಕೂಡ ದುರಂತದಲ್ಲಿ ಮೃತಪಟ್ಟಿದ್ದಾರೆ. ಹಲವು ಕನಸುಗಳನ್ನು ಹೊತ್ತು ‘ಡ್ರೀಮ್ ಲೈನರ್’ನಲ್ಲಿ ಪ್ರಯಾಣಿಸುತ್ತಿದ್ದವರ ಬದುಕು ಕ್ಷಣಾರ್ಧದಲ್ಲೇ ಅಂತ್ಯಗೊಂಡಿದೆ. ಹೊಸದಾಗಿ ಮದುವೆಯಾದವರು, ಸಂಬಂಧಿಕರ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಬಂದವರು, ವಿದ್ಯಾರ್ಥಿಗಳು, ಪುಟ್ಟ ಮಕ್ಕಳು, ಅನುಭವಿ ಪೈಲಟ್​ಗಳು ಕೂಡ ವಿಧಿಯ ಘೋರ ಕೃತ್ಯಕ್ಕೆ ಬಲಿಯಾಗಿದ್ದಾರೆ.

ಏರ್ ಇಂಡಿಯಾ ಸಂಸ್ಥೆ ಕೂಡ ಘಟನೆಯ ಬಗ್ಗೆ ದಿಗ್ಭŠಮೆ ವ್ಯಕ್ತಪಡಿಸಿ, ಸಂತಾಪ ಸಲ್ಲಿಸಿದೆ. ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ. ಏರ್ ಇಂಡಿಯಾ ಒಡೆತನ ಹೊಂದಿರುವ ಟಾಟಾ ಗ್ರೂಪ್ ಮೃತರ ಕುಟುಂಬವರ್ಗಗಳಿಗೆ ತಲಾ 1 ಕೋಟಿ ರೂ.ಗಳ ಪರಿಹಾರ ಘೋಷಿಸಿದ್ದರೆ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿದೆ. ಅಪಘಾತಗಳು ಎಂದೂ ಭರಿಸಲಾಗದ ನೋವನ್ನು ಸೃಷ್ಟಿಸುತ್ತವೆ. ಈ ಹಿಂದೆ ಕರ್ನಾಟಕದ ಮಂಗಳೂರಿನಲ್ಲಿ 2010ರಲ್ಲಿ ಸಂಭವಿಸಿದ ವಿಮಾನ ದುರಂತದ ಕಹಿನೆನಪು 15 ವರ್ಷಗಳಾದರೂ ಮಸುಕಾಗಿಲ್ಲ. ಆ ಅಪಘಾತದಲ್ಲಿ 158 ಪ್ರಯಾಣಿಕರು ಮೃತಪಟ್ಟು, ಕೇವಲ 8 ಮಂದಿ ಬದುಕುಳಿದಿದ್ದರು.

ಅಹಮದಾಬಾದ್​ನ ಅಪಘಾತ ನಿಜಕ್ಕೂ ದುರದೃಷ್ಟಕರ. ಭವಿಷ್ಯದಲ್ಲಿ ಇಂಥ ಘಟನೆಗಳು ಮತ್ತೆಂದೂ ಮರುಕಳಿಸದಿರಲಿ. ಇಂಥ ದುಃಖದ ಸನ್ನಿವೇಶದಲ್ಲಿ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗದೆ ವಿವೇಚನೆಯಿಂದ ನಡೆದುಕೊಂಡು, ಸಂತ್ರಸ್ತರ ನೆರವಿಗೆ ಬರಲಿ. ಸುರಕ್ಷಾ ಕ್ರಮಗಳ ಬಗ್ಗೆ ಮತ್ತೊಮ್ಮೆ ಅವಲೋಕನ ನಡೆಯಲಿ.

ಅಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 10 ಪ್ರಮುಖ ವಿಮಾನ ದುರಂತಗಳಿವು! ಇಲ್ಲಿದೆ ನೋಡಿ ಪಟ್ಟಿ | Plane Crash

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…