ವರ್ಷಾಂತ್ಯದ 20 ದಿನಗಳಲ್ಲಿ 51 ಮರಣ

ಬೆಂಗಳೂರು: ಹಳೇ ವರ್ಷಕ್ಕೆ ಬೀಳ್ಕೊಡುವ ಹಾಗೂ ಹೊಸ ವರ್ಷದ ಆಗಮನದ ಸಂತಸದಲ್ಲಿರಬೇಕಾದ ಹೊತ್ತಿನಲ್ಲಿ ರಾಜ್ಯಕ್ಕೆ ಒಂದರ ಮೇಲೊಂದರಂತೆ ಸಾವಿನ ಆಘಾತಗಳು ಬಂದಪ್ಪಳಿಸುತ್ತಿವೆ. ಕಳೆದ 20 ದಿನಗಳಲ್ಲಿ ಹಲವು ಭೀಕರ ದುರಂತಗಳು ಸಂಭವಿಸಿದ್ದು, 51 ಜನ ಜೀವ ಕಳೆದುಕೊಂಡಿದ್ದಾರೆ.

ಮಂಡ್ಯದಲ್ಲಿ ಕಾಲುವೆಗೆ ಬಸ್ ಉರುಳಿ 13 ಜನ ಪ್ರಾಣ ಬಿಟ್ಟಿದ್ದರು. ಬೆಂಗಳೂರಿನ ಕೆ.ಆರ್.ಪುರ ಸಮೀಪದ ಗೋದಾಮಿನಲ್ಲಿ ರ್ಯಾಕ್​ಗಳು ಕುಸಿದು 3 ಕಾರ್ವಿುಕರು ಮೃತಪಟ್ಟ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆ ಸುಳ್ವಾಡಿ ಗ್ರಾಮದ ದೇವಸ್ಥಾನದಲ್ಲಿ ವಿಷಾಹಾರ ಸೇವಿಸಿ 13 ಜನರ ಪ್ರಾಣಪಕ್ಷಿ ಹಾರಿಹೋಗಿ 82ಕ್ಕೂ ಹೆಚ್ಚು ಜನ ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಶನಿವಾರ ಬಾಗಲಕೋಟೆ ಜಿಲ್ಲೆ ಮುಧೋಳ ಬಳಿ ನಿರಾಣಿ ಡಿಸ್ಟಿಲರಿ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿ 4 ಕಾರ್ವಿುಕರು ಸುಟ್ಟು ಕರಕಲಾಗಿದ್ದಾರೆ.

ಬಸ್ ಕಾಲುವೆಗೆ ಬಿದ್ದು 30 ಸಾವು

ನ.24ರ ಕರಾಳ ಶನಿವಾರಕ್ಕೆ ಮಂಡ್ಯ ಜಿಲ್ಲೆ ಸಾಕ್ಷಿಯಾಯಿತು. ಪಾಂಡವಪುರದಿಂದ ಹೊರಟ ಖಾಸಗಿ ಬಸ್ಸೊಂದು ಕನಗನಮರಡಿ ಬಳಿ ಕಾಲುವೆಗೆ ಬಿದ್ದು 30 ಜನ ಮೃತಪಟ್ಟರು. ಇದರಲ್ಲಿ 15 ಪುರುಷರು, 6 ಮಹಿಳೆಯರು ಹಾಗೂ 9 ಮಕ್ಕಳು ಇದ್ದರು.

ಹೈಡ್ರೋಜನ್ ಸಿಲಿಂಡರ್ ಸ್ಫೋಟ

ಡಿ.5ರಮಧ್ಯಾಹ್ನ ಬೆಂಗಳೂರಿನ ಐಐಎಸ್​ಸಿ ಯಲ್ಲಿ ಜಲಜನಕ ತುಂಬಿದ ಸಿಲಿಂಡರ್ ಸ್ಪೋಟಗೊಂಡು ಯುವ ವಿಜ್ಞಾನಿ ಮನೋಜ್ ಕುಮಾರ್ ಮೃತಪಟ್ಟಿದ್ದರು. ಇನ್ನು ಮೂವರು ಯುವ ಸಂಶೋಧಕರು ಗಂಭೀರವಾಗಿ ಗಾಯಗೊಂಡು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರ್ಯಾಕ್​ಗಳಡಿ ಜೀವಬಿಟ್ಟ ಮೂವರು ಕಾರ್ವಿುಕರು

ಡಿ.13ರಂದು ಬೆಂಗಳೂರಿನ ಕೆ.ಆರ್. ಪುರ ಸಮೀಪದ ಸೀಗೇಹಳ್ಳಿಯಲ್ಲಿರುವ ಸೂಪರ್ ಮಾರ್ಕೆಟ್ ಗೋದಾಮಿನಲ್ಲಿ ಬೃಹತ್ ರ್ಯಾಕ್​ಗಳು ಕುಸಿದು 3 ಕಾರ್ವಿುಕರು ಮೃತಪಟ್ಟಿದ್ದರು. ಗಾಯಗೊಂಡಿರುವ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.


ನಿರಾಣಿ ಡಿಸ್ಟಿಲರಿಯಲ್ಲಿ ಸ್ಪೋಟ, ನಾಲ್ವರು ಮೃತ

ಬಾಗಲಕೋಟೆ: ಮುಧೋಳ ತಾಲೂಕು ಕುಳಲಿ ಗ್ರಾಮದ ಸಮೀಪವಿರುವ ಮಾಜಿ ಸಚಿವ ಮುರುಗೇಶ ನಿರಾಣಿ ಒಡೆತನದ ನಿರಾಣಿ ಡಿಸ್ಟಿಲರಿ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಉಂಟಾದ ಭಾರಿ ಸ್ಪೋಟದಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಡಿಸ್ಟಿಲರಿ ಪ್ರಾಯೋಗಿಕ ಹಂತದಲ್ಲಿದ್ದು, ಇಟಿಪಿ (ಎಫ್ಲುಯೆಂಟ್ ಟ್ರೀಟ್​ವೆುಂಟ್ ಪ್ಲಾಂಟ್) ಘಟಕದಲ್ಲಿ ಟೆಸ್ಟಿಂಗ್ ಮಾಡುವ ವೇಳೆ ಸೇಫ್ಟಿ ವಾಲ್ವ್ ಬ್ಲಾಕ್ ಆದ ಕಾರಣ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದ್ದು, ಸ್ಪೋಟದ ತೀವ್ರತೆಗೆ ಕಾರ್ಖಾನೆಯ ಇಡೀ ಕಟ್ಟಡ ನೆಲಸಮವಾಗಿದೆ.

ಕಲಬುರಗಿಯ ಇಂಜಿನಿಯರ್ ಶರಣಬಸಪ್ಪ ತೋಟದ (35), ಯಡಹಳ್ಳಿಯ ಶಿವಾನಂದ ವೀರಯ್ಯ ಹೊಸಮಠ (40), ಕುಳಲಿ ಗ್ರಾಮದ ನಾಗಪ್ಪ ಬಾಳಪ್ಪ ಧರ್ಮಟ್ಟಿ (45), ನಾವಲಗಿ ಗ್ರಾಮದ ಜಗದೀಶ ಶಂಕರ ಪಟ್ಟಣಶೆಟ್ಟಿ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಧೋಳ ನಗರದ ಸೈದುಸಾಬ ಹೊಸಮನಿ, ಬಿಹಾರ ಮೂಲದ ಮೋಹನಸಿಂಗ್ ಹಾಗೂ ಮೃತ ಶಿವಾನಂದರ ಪುತ್ರ 9 ವರ್ಷದ ಮನೋಜ ಶಿವಾನಂದ ಹೊಸಮಠ, ಸಿದ್ದಪ್ಪ ಬಸಪ್ಪ ಪಾಟೀಲ, ರಮೇಶ ಅಪ್ಪಾಜಿ ಜಾಧವ, ಮಧುಕರ ಅಶೋಕ ಘೊರ್ಪಡೆ, ಸತೀಶ ಜೀನಪ್ಪ ಗಣಿ, ಲಕ್ಷ್ಮಪ್ಪ ಸೋಮಶೇಖರ ಯಲನಾಯ್ಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಪೋಟಕ್ಕೆ ನಿಖರ ಕಾರಣ ಪತ್ತೆ ಹಚ್ಚಲು ಬಾಯ್ಲರ್ ಇನ್ಸ್​ಪೆಕ್ಟರ್ ಹಾಗೂ ಟೆಕ್ನಿಷಿಯನ್ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ, ಬಾಗಲಕೋಟೆ ಡಿಸಿ ಕೆ.ಜಿ. ಶಾಂತಾರಾಮ್ ಬೆಳಗಾವಿ ವಲಯ ಐಜಿಪಿ ಎಚ್.ಎಸ್. ರೇವಣ್ಣ, ಎಂಎಲ್​ಸಿ ಎಸ್.ಆರ್. ಪಾಟೀಲ, ಹಣಮಂತ ನಿರಾಣಿ, ಉದ್ಯಮಿ ಸಂಗಮೇಶ ನಿರಾಣಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಸಂಬಂಧಿಕರ ಆಕ್ರೋಶ

ಭಾರಿ ಅವಘಡ ಸಂಭವಿಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಿಎಂ ಕುಮಾರಸ್ವಾಮಿ ಸೇರಿ ಸರ್ಕಾರದಿಂದ ಯಾವ ಪ್ರತಿನಿಧಿಗಳೂ ಧಾವಿಸಿಲ್ಲ ಎಂದು ಮೃತರ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿ, ಸ್ಥಳದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲರಿಗೆ ಮುತ್ತಿಗೆ ಹಾಕಿದರು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಪ್ರತ್ಯೇಕವಾಗಿ ತಲಾ ಐದು ಲಕ್ಷ ರೂ. ಪರಿಹಾರ ಘೊಷಣೆ ಮಾಡಬೇಕು. ಪರಿಹಾರ ದೊರೆಯದೆ ಹೋದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

5 ಲಕ್ಷ ರೂ. ಪರಿಹಾರ

ಆಕಸ್ಮಿಕ ಸ್ಪೋಟಕ್ಕೆ ವಿಷಾದ ವ್ಯಕ್ತಪಡಿಸಿರುವ ಮುರುಗೇಶ ನಿರಾಣಿ, ಮೃತ ನಾಲ್ವರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಿದ್ದು, ವಿಮೆ ಅನುಕೂಲವನ್ನೂ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬದವರು ಉದ್ಯೋಗ ಬಯಸಿದರೆ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ನೀಡುವ ಭರವಸೆ ನೀಡಿದ್ದಾರೆ. ಮಿಥೆನಾಲ್ ಹೊರಗಡೆ ಹೋಗದೆ ಇರುವುದರಿಂದ ಈ ಅವಘಡ ಸಂಭವಿಸಿದೆ. ಸೇಫ್ಟಿ ವಾಲ್ವ್ ಕಾರ್ಯನಿರ್ವಹಿಸಿಲ್ಲ. ಅಲ್ಲದೆ, ಇದರ ಹಿಂದೆ ತಮಗೆ ಆಗದಿರುವ ಕಿಡಿಗೇಡಿಗಳ ಕೈವಾಡ ಇದೆ ಎಂಬ ಶಂಕೆಯಿದ್ದು, ತನಿಖೆ ನಂತರ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.

ಡಿಸ್ಟಿಲರಿ ಘಟಕ ಸ್ಪೋಟದ ಖಚಿತ ಕಾರಣ ಅರಿಯಲು ಈಗಾಗಲೇ ಬೆಳಗಾವಿಯಿಂದ ವಿಶೇಷ ತಜ್ಞರನ್ನು ಕರೆಸಲಾಗಿದೆ. ಇನ್ನೂ 24 ಗಂಟೆ ಕಾರ್ಯಾಚರಣೆ ನಡೆಯಲಿದ್ದು, ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ.

| ಸಿ.ಬಿ. ರಿಷ್ಯಂತ್ ಎಸ್​ಪಿ, ಬಾಗಲಕೋಟೆ

Leave a Reply

Your email address will not be published. Required fields are marked *