ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ರಸ್ತೆಗಿಳಿದ ಗವರ್ನರ್ ಕಿರಣ್​ ಬೇಡಿ; ರಸ್ತೆ ಸುರಕ್ಷತೆ ಕುರಿತು ಫುಲ್​ ಕ್ಲಾಸ್

ಪುದುಚೇರಿ: ಇಲ್ಲಿನ ಲೆಫ್ಟಿನಂಟ್​ ಗವರ್ನರ್​ ಕಿರಣ್​ ಬೇಡಿ ಭಾನುವಾರ ಟ್ರಾಫಿಕ್​ ಪೊಲೀಸ್ಆಗಿ ಕಾರ್ಯನಿರ್ವಹಿಸಿದರು.

ಸದ್ಯ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಂದೋಲನ ನಡೆಯುತ್ತಿದ್ದು, ಅದರ ಅನ್ವಯ ಕಿರಣ್​ ಬೇಡಿ ಟ್ರಾಫಿಕ್​ ಪೊಲೀಸ್​ರಂತೆ ಕಾರ್ಯನಿರ್ವಹಿಸಿದರು.

ಹೆಲ್ಮೆಟ್​ ಇಲ್ಲದೆ ಬೈಕ್​ ಓಡಿಸುತ್ತಿದ್ದವರನ್ನು ತಡೆದು, ಎಲ್ಲಿ ನಿಮ್ಮ ಹೆಲ್ಮೆಟ್​. ಹೆಲ್ಮೆಟ್​ ಧರಿಸಿ ಬೈಕ್​ ಓಡಿಸಿ ಎಂದು ಹೇಳಿದರು. ಹಾಗೇ ಒಂದು ಬೈಕ್​ನಲ್ಲಿ ಮೂರು-ನಾಲ್ಕು ಜನ ಇದ್ದವರನ್ನು ತಡೆದು ಟ್ರಾಫಿಕ್​ ಸಂಚಾರ ಉಲ್ಲಂಘಿಸಬಾರದು ಎಂದು ಹೇಳಿದ್ದಾರೆ. ವಿಡಿಯೋವನ್ನು ಕಿರಣ್​ ಬೇಡಿ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು ಅದೀಗ ವೈರಲ್​ ಆಗಿದೆ.

ಒಬ್ಬಾತ ತನ್ನ ಬೈಕ್​ನಲ್ಲಿ ಹೆಂಡತಿ, ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ. ಅದನ್ನು ನೋಡಿದ ಕಿರಣ್​ ಬೇಡಿ, ಹೀಗೆ ಹೋದರೆ ನಾಲ್ಕೂ ಜನ ಬೀಳುತ್ತೀರಿ ಎಂದಿದ್ದಲ್ಲದೆ, ನಿಯಮ ಮೀರದಂತೆ ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬರನ್ನೂ ನಿಲ್ಲಿಸಿ, ಒಬ್ಬರಾದ ಬಳಿಕ ಮತ್ತೊಬ್ಬರನ್ನು ಪ್ರಶ್ನಿಸಿ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದರು. ಸಾಮರ್ಥ್ಯಕ್ಕಿಂತ ಜಾಸ್ತಿ ಜನರನ್ನು ಒಯ್ಯುತ್ತಿದ್ದ ಆಟೋ ಚಾಲಕನನ್ನು ನಿಲ್ಲಿಸಿದ್ದಲ್ಲದೆ, ಅದರಿಂದ ಓರ್ವ ಪ್ರಯಾಣಿಕರನ್ನು ಕೆಳಗೆ ಇಳಿಸಿದರು.

ಜನರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಿರಣ್​ ಬೇಡಿ ಪುದುಚೇರಿ ಸರ್ಕಾರ ಮತ್ತು ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿಯವರನ್ನು ಒತ್ತಾಯಿಸಿದ್ದಾರೆ.
ಕಿರಣ್​ ಬೇಡಿ ಮಾಜಿ ಐಪಿಎಸ್​ ಅಧಿಕಾರಿ. ದೆಹಲಿಯ ಟ್ರಾಫಿಕ್​ ಪೊಲೀಸ್​ ಇಂಚಾರ್ಜ್​ ಆಗಿದ್ದವರು. ಅವರು ಅಧಿಕಾರದಲ್ಲಿದ್ದಾಗ ಕೂಡ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಿ ಸ್ಟ್ರಿಕ್ಟ್​ ಆಫೀಸರ್​ ಎನಿಸಿಕೊಂಡಿದ್ದರು.