ಕುಂದಾಪುರದಲ್ಲಿ ಸಂಚಾರ ಸಮಸ್ಯೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಲು ನಿಯಮ ಪ್ರಕಾರ ಅವಕಾಶ ಇಲ್ಲ. ಆದರೆ ಭಟ್ಕಳ ಕಡೆ ಹೋಗುವ ಬಸ್‌ಗಳಿಗೆ ಶಾಸ್ತ್ರಿ ವೃತ್ತವೇ ನಿಲ್ದಾಣ.

ಒಂದೆರಡು ಬಸ್ ಹೊರತುಪಡಿಸಿ ಭಟ್ಕಳಕ್ಕೆ ಹೋಗುವ ಯಾವ ಬಸ್‌ಗಳಿಗೆ ಪರವಾನಗಿಯೂ ಇಲ್ಲ ಎಂಬ ಆರೋಪವಿದೆ. ಸಾರಿಗೆ ಇಲಾಖೆ, ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳಿಗೂ ಪರವಾನಗಿ ಇಲ್ಲದೆ ಬಸ್ ಸಂಚರಿಸುವುದು ಗೊತ್ತು. ಪರವಾನಗಿ ಇಲ್ಲದೆಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ಗಳು ರಾಜರೋಷವಾಗಿ ಸಂಚರಿಸುತ್ತವೆ.

ಶಾಸ್ತ್ರಿ ವೃತ್ತದಲ್ಲಿ ಕೇವಲ ಭಟ್ಕಳ ಕಡೆ ಹೋಗುವ ಬಸ್‌ಗಳಷ್ಟೇ ನಿಲ್ಲುವುದಿಲ್ಲ. ಬೈಂದೂರು, ಗಂಗೊಳ್ಳಿ, ಕೊಲ್ಲೂರು ಹಾಗೂ ಇನ್ನಿತರ ಗ್ರಾಮೀಣ ಭಾಗದ ಬಸ್‌ಗಳು ಬರುತ್ತವೆ. ಆದರೆ ಅವುಗಳು ಒಂದೆರಡು ನಿಮಿಷ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟು ಹೋದರೆ, ಭಟ್ಕಳ ಕಡೆ ಹೋಗುವ ಬಸ್‌ಗಳು ಶಾಸ್ತ್ರಿ ವೃತ್ತದಲ್ಲಿ ತಾಸುಗಟ್ಟಲೆ ನಿಲ್ಲುತ್ತವೆ. ಶಾಸ್ತ್ರಿ ವೃತ್ತದಲ್ಲಿ ಒಂದು ಕಡೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿ ಕಿಷ್ಕೆಂದೆಯಂತಿದೆ. ಅಲ್ಲೇ ಬಸ್ ನಿಲುಗಡೆ ಮಾಡುವುದರಿಂದ ರಸ್ತೆ ಮತ್ತಷ್ಟು ಕಿರಿದಾಗಿ ಸುಗಮ ಸಂಚಾರಕ್ಕೆ ಸಂಚಕಾರ ತರುತ್ತಿದೆ.

ಕಳೆದು ಹೋಗಿದೆ ಫುಟ್‌ಪಾತ್: ಕುಂದಾಪುರ ಮುಖ್ಯರಸ್ತೆ ಹಾಗೂ ಕೆಲವು ಕಡೆ ಒಳರಸ್ತೆಗಳಲ್ಲಿ ಪಾದಚಾರಿ ಸಂಚಾರಕ್ಕೆ ಪುರಸಭೆ ಇಂಟರ್‌ಲಾಕ್ ಅಳವಡಿಸಿ, ಫುಟ್‌ಪಾತ್ ನಿರ್ಮಿಸಿತ್ತು. ಆದರೆ ವಾಹನ ನಿಲುಗಡೆಗೆ ಫುಟ್‌ಪಾತ್ ಕಳೆದು ಹೋಗಿದೆ. ಪ್ರಸಕ್ತ ಅಲ್ಲಲ್ಲಿ ಫುಟ್‌ಪಾತ್ ಕಿತ್ತು ಹಾಕಿರುವುದರಿಂದ ಪಾದಚಾರಿಗಳ ಪಾಡು ಕೇಳುವವರಿಲ್ಲ.

ಅಪಾಯ ಕಟ್ಟಿಟ್ಟ ಬುತ್ತಿ
ಕುಂದಾಪುರ ಮುಖ್ಯರಸ್ತೆ ಹಾಗೂ ಅಚ್ಚುಕಟ್ಟು ಪ್ರದೇಶದ ಒಳ ರಸ್ತೆಗಳು ಏಕಮುಖ ಸಂಚಾರಕ್ಕೆ ಸೀಮಿತ. ಆದರೆ ಯಾವ ರಸ್ತೆಯಲ್ಲೂ ಸಂಚಾರಿ ನಿಯಮ ಪಾಲನೆ ಆಗುವುದಿಲ್ಲ. ಪ್ರಯಾಣಿಕರು ಎಲ್ಲಾದರೂ ಯಾಮಾರಿದರೆ ಆಸ್ಪತ್ರೆ ದರ್ಶನ ಖಚಿತ. ಮುಖ್ಯರಸ್ತೆ ಶಿವಪ್ರಸಾದ್ ಆಟೋ ಸ್ಟ್ಯಾಂಡ್, ಕುಂದೇಶ್ವರ ದೇವಸ್ಥಾನ ಎದುರು, ಪಾರಿಜಾತ ಸರ್ಕಲ್, ಹಳೇ ಬಸ್‌ಸ್ಟ್ಯಾಂಡ್ ಪರಿಸರದ ರಸ್ತೆಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಸಾಮಾನ್ಯ. ಕುಂದೇಶ್ವರ ದೇವಸ್ಥಾನ ಎದುರು ಖಾಸಗಿ ವಾಣಿಜ್ಯ ಮಳಿಗೆ ಅಂಗಡಿ ಮುಂಗಟ್ಟುಗಳ ಕಡೆ ಹೋಗುವ ಕಾರ್, ಬೈಕ್, ಆಟೋಗಳಿಗೆ ಸಂಚಾರಿ ನಿಯಮ ಅನ್ವಯವಾಗುವುದಿಲ್ಲ.
ಕುಂದಾಪುರ ಶೆಣೈ ವೃತ್ತ (ಪಾರಿಜಾತ ಸರ್ಕಲ್) ಬಳಿ ಸಂಚಾರಿ ನಿಯಮ ಪಾಲನೆಗಾಗಿ ಪ್ಲಾಸ್ಟಿಕ್ ಪ್ರತಿಫಲನ ಕಂಬಗಳನ್ನು ನೆಡಲಾಗಿತ್ತು. ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಎಲ್ಲ ಕಂಬಗಳನ್ನು ಹಾಳುಗೆಡವಲಾಗಿದೆ.

ಬಸ್‌ಗಳ ವಿರುದ್ಧ ಕ್ರಮವಿಲ್ಲ: ಹಿಂದೆ ಕುಂದಾಪುರದಲ್ಲಿ ಪಿಎಸ್ಸೈ ಆಗಿದ್ದ ಕೃಷ್ಣಪ್ಪ ಹಾಗೂ ವಿನಯ ಗಾಂವ್ಕರ್ ಶಾಸ್ತ್ರಿ ವೃತ್ತದಲ್ಲಿ ನಿಲ್ಲುವ ಬಸ್‌ಗಳಿಗೆ ಬ್ರೇಕ್ ಹಾಕಿದ್ದರು. ನಂತರ ಪಿಎಸ್ಸೈ ಸತೀಶ್ ಕೂಡ ಶಾಸ್ತ್ರಿ ವೃತ್ತದಲ್ಲಿ ನಿಲ್ಲುವ ಬಸ್ ವಿರುದ್ಧ ಕ್ರಮ ಕೈಗೊಂಡಿದ್ದರು. ನಂತರದ ದಿನದಲ್ಲಿ ಶಾಸ್ತ್ರಿ ವೃತ್ತದಲ್ಲಿ ಬಸ್‌ಗಳದ್ದೇ ಕಾರುಬಾರು. ತೆಂಗಿನಗುಂಡಿ, ಸರ್ಪನಕಟ್ಟೆ, ಮಾರುಕೇರಿ ಕಡೆ ಪರವಾನಗಿ ಪಡೆದ ಬಸ್ ಭಟ್ಕಳಕ್ಕೆ ಹೋಗುತ್ತದೆ. ಭಟ್ಕಳ ಕೆಎಸ್‌ಆರ್‌ಟಿಸಿ ನಿಲ್ದಾಣದ ಎದುರೇ ತಾಸುಗಟ್ಟಲೆ ನಿಂತು ಜನರ ಹೊತ್ತು ತರುತ್ತವೆ. ಪರವಾನಗಿ ಇದ್ದ ಪ್ರದೇಶಕ್ಕೆ ಬಸ್ ಹೋಗುವುದೇ ಇಲ್ಲ.

ಕುಂದಾಪುರದಲ್ಲಿ ಏಕಮುಖ ಸಂಚಾರವಿದ್ದರೂ ಎರಡೂ ಬದಿಯಲ್ಲಿ ವಾಹನ ಸಂಚರಿಸುತ್ತದೆ. ಶಾಸ್ತ್ರೀ ಸರ್ಕಲ್ ಬಳಿ ಗಂಟೆಗಟ್ಟಲೆ ಬಸ್ ನಿಲ್ಲಿಸಲಾಗುತ್ತಿದೆ. ಇಂಟರ್‌ಸೆಪ್ಟರ್ ಇದ್ದರೂ ಹೆಲ್ಮೆಟ್ ಇಲ್ಲದೇ ಓವರ್ ಸ್ಪೀಡ್‌ನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಾರೆ. ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುವುದು ಪ್ರಶ್ನೆ. ಆರ್‌ಟಿಒ ನಿಯಮ ಪ್ರಕಾರ ಯಾವ ಬಸ್‌ಗಳನ್ನೂ ಬಸ್ ನಿಲ್ದಾಣದಲ್ಲಿ ಅರ್ಧ ನಿಮಿಷಕ್ಕೂ ಹೆಚ್ಚು ನಿಲ್ಲಿಸುವಂತಿಲ್ಲ. ಆದರೆ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ.
| ವಾಸುದೇವ ಮುದೂರು, ಸಾಮಾಜಿಕ ಹೋರಾಟಗಾರ