ಸಂಚಾರಿ ಪೇದೆಯ ದರ್ಪಕ್ಕೆ ತುತ್ತಾದ್ದ ಟೆಂಪೋ ಚಾಲಕನ ತಾಯಿಗೆ ಧಮ್ಕಿ: ಕಣ್ಮರೆಯಾಗಿರೋ ಮಗನಿಗಾಗಿ ತಾಯಿ ಕಣ್ಣೀರು

ಬೆಂಗಳೂರು: ಸಂಚಾರಿ ಪೇದೆಯ ದರ್ಪಕ್ಕೆ ತುತ್ತಾಗಿ ಪೊಲೀಸ್​ ಪ್ರಕರಣದಲ್ಲಿ ಸಿಲುಕಿ ಭಯಗೊಂಡು ಟೆಂಪೋ ಚಾಲಕ ಎರಡು ದಿನಗಳಿಂದ ಮನೆಗೆ ಬಾರದೆ ಕಣ್ಮರೆಯಾಗಿದ್ದರೆ, ಇತ್ತ ಚಾಲಕನ ತಾಯಿಗೆ ಅಪರಿಚಿತರೊಬ್ಬರು ಧಮ್ಕಿ ಹಾಕಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ನಗರದ ಜೆ.ಸಿ.ರಸ್ತೆಯ ಒನ್ ವೇಯಲ್ಲಿ ಶುಕ್ರವಾರ ಟೆಂಪೋ ಚಾಲನೆ ಮಾಡಿದ್ದ ಸುನೀಲ್​ರನ್ನು ಕರ್ತವ್ಯನಿರತ ಹಲಸೂರು ಸಂಚಾರಿ ಠಾಣೆ ಮುಖ್ಯಪೇದೆ ಮಹಾಸ್ವಾಮಿ ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಹಲ್ಲೆ ನಡೆಸಿದ್ದರು. ಸಂಚಾರಿ ಪೇದೆಯ ಹಲ್ಲೆಯ ದೃಶ್ಯ ಎಲ್ಲೆಡೆ ವೈರಲ್ ಆಗಿ, ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ದುರ್ವರ್ತನೆ ತೋರಿದ ಸಂಚಾರಿ ಮುಖ್ಯಪೇದೆ ಮಹಾಸ್ವಾಮಿ ವಿರುದ್ಧ ಯಾವುದೇ ಕ್ರಮವಿಲ್ಲ ಎಂದ ಪೊಲೀಸ್​ ಇಲಾಖೆ ವಿರುದ್ಧ ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದರು.

ಈ ಬೆಳವಣಿಗೆಯ ಬೆನ್ನಲ್ಲೆ ಟೆಂಪೋ ಚಾಲಕನ ವಿರುದ್ಧ ಪೇದೆ ಮಹಾಸ್ವಾಮಿ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಾನೇ ಹಲ್ಲೆ ಮಾಡಿ, ತಾನೇ ದೂರು ದಾಖಲಿಸಿದ ಸಂಚಾರಿ ಪೊಲೀಸ್ ಪೇದೆ ವಿರುದ್ಧ ಮತ್ತೆ ನೆಟ್ಟಿಗರು ಕಿಡಿಕಾರಿದ್ದರು.

ಇಷ್ಟೆಲ್ಲ ಬೆಳವಣಿಗೆಯ ಮಧ್ಯೆ ಟೆಂಪೋ ಚಾಲಕ ಸುನೀಲ್ ತಾಯಿ ರತ್ನಮ್ಮರಿಗೆ ಅಪರಿಚಿತರು ಧಮ್ಕಿ ಹಾಕಿದ್ದಾರೆ. ಶನಿವಾರ ರಾತ್ರಿ 10ರ ಸುಮಾರಿಗೆ ಜರಗೇನಹಳ್ಳಿ ನಿವಾಸಕ್ಕೆ ಬಂದ ಅಪರಿಚಿತರು ನಿನ್ನ ಮಗ ಸುನೀಲ್ ಎಲ್ಲಿ? ನಿನ್ನ ಮಗ ನಮ್ಮ ಕೈಗೆ ಸಿಕ್ಕರೆ ಕೈ ಕಾಲು ಮುರಿದು ಹಾಕುತ್ತೇವೆ. ನಿನ್ನನ್ನು, ನಿನ್ನ ಮಗನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಸುನೀಲ್ ತಾಯಿ ರತ್ನಮ್ಮ ದೂರು ನೀಡಿದ್ದು, ಎನ್.ಸಿ.ಆರ್ ದಾಖಲಾಗಿದೆ. ಘಟನೆ ನಂತರ ಭಯಗೊಂಡಿರುವ ಟೆಂಪೋ ಚಾಲಕ ಸುನೀಲ್​ ಇನ್ನೂ ಮನೆಗೆ ಬಂದಿಲ್ಲ. ಶುಕ್ರವಾರ ರಾತ್ರಿ ಘಟನೆಯ ಬಗ್ಗೆ ತಾಯಿ ರತ್ನಮ್ಮರಿಗೆ ಕರೆ ಮಾಡಿ ತಿಳಿಸಿದ್ದು, ಎರಡು ದಿನಗಳಿಂದ ಮನೆಗೆ ಬಾರದ ಮಗನ ಬಗ್ಗೆ ತಾಯಿ ಕಂಗಾಲಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ರತ್ನಮ್ಮ, ಮೊನ್ನೆ ಪೊಲೀಸರು ಹಲ್ಲೆ ಮಾಡಿರುವ ವಿಡಿಯೋ ನೋಡಿ ತುಂಬಾ ನೋವಾಯಿತು. ಮುಂದೆ ಗಾಡಿಗಳು ಬರುತ್ತಿವೆ. ಮುಂದೆ ನಿಲ್ಲಿಸ್ತಿನಿ ಎಂದು ಹೇಳಿದರು ಕೇಳದೆ, ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಎರಡು ದಿನಗಳಿಂದ ನನ್ನ ಮಗ ಸುನೀಲ್​ ಮನೆಗೆ ಬಂದಿಲ್ಲ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಐದಾರು ಮಂದಿ ಮನೆಗೆ ಬಂದು ಧಮ್ಕಿ ಹಾಕಿ ಹೋಗಿದ್ದಾರೆ. ಮೂರು ವರ್ಷದಿಂದ ನನ್ನ ಮಗ ಡ್ರೈವರ್ ಕೆಲಸ ಮಾಡುತ್ತಿದ್ದಾನೆ. ನನಗೆ ಇರುವವನು ಒಬ್ಬನೆ ಮಗ, ಅವನು ಇಲ್ಲಾಂದ್ರೆ ನಾನೇನು ಮಾಡಬೇಕು ಎಂದು ರತ್ನಮ್ಮ ಅವಲತ್ತುಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)

3 Replies to “ಸಂಚಾರಿ ಪೇದೆಯ ದರ್ಪಕ್ಕೆ ತುತ್ತಾದ್ದ ಟೆಂಪೋ ಚಾಲಕನ ತಾಯಿಗೆ ಧಮ್ಕಿ: ಕಣ್ಮರೆಯಾಗಿರೋ ಮಗನಿಗಾಗಿ ತಾಯಿ ಕಣ್ಣೀರು”

  1. ಪೊಲಿಸರ ದೌರ್ಭಾನ್ಯಕ್ಕೆ ಹಿರಿಯ ಅಧಿಕಾರಿಗಳ ಸಪೋರ್ಟ್ ಇದೆ … ಏಕೆಂದರೆ ಅವನು ಸುಲಿಗೆ ಮಾಡಿ ತಂದದ್ದನ್ನು ಹಂಚುಣ್ಣುತ್ತಿದ್ದವರೆ ಅಲ್ಲವಾ ಮೇಳ ಅಧಿಕಾರಿಗಳು… ಥೂ ಇವರ ಜನ್ಮಕ್ಕೆ

  2. ಸಂಚಾರೀ ಪೋಲೀಸರು ಲಂಚಕೋರರು ಮತ್ತು ಸುಲಿಗೆಕೋರರು. ನಮ್ಮ ಮಗನಿಗೆ
    ಮಂಗಳೂರಿನಲ್ಲಿ ಎಲ್ಲಾ ದಾಖಲೆಗಳೂ ಸರಿ ಇದ್ದರೂ, ಯಾವಾಗಲೋ ಎರಡು ವರ್ಷಗಳ ಹಿಂದೆ ಸೀಟ್’ಬೆಲ್ಟ್ ಹಾಕದೇ ಕಾರು ಚಲಾಯಿಸಿದೆ ಎಂದು ಹೇಳಿ ಎರಡು ನೂರು (200) ರೂಪಾಯಿ ದಂಡ ಅಂತ ಹೇಳಿ 200 ತೆಗೆದುಕೊಂಡು, ನೂರು (100) ರೂಪಾಯಿಯ ರಸೀದಿ ಕೊಟ್ಟರು. ಮನೆಗೆ ಬಂದು ರಸೀದಿ ನೋಡಿದಾಗ ನಮಗೆ ಗೊತ್ತಾಯಿತು. ಅವರು ಹಾಕುವ ಆರೋಪಕ್ಕೆ ಸೂಕ್ತ ಫೋಟೋ ಅಥವಾ ವೀಡಿಯೋ ದಾಖಲೆ ಕಡ್ಡಾಯವಾಗಿ ಮಾಡಬೇಕು. ಇಲ್ಲದಿದ್ದರೆ ಇವರ ಲಂಚಗೊಂಡಿತನ ಇನ್ನೂ ಅತಿರೇಕವಾಗಿ ತಾರಕಕ್ಕೇರುತ್ತದೆ. ಅವರು ಮಾಡುವ ಆರೋಪಗಳಿಗೆ ಪ್ರಮಾಣವಾಗಿ ಫೋಟೋ ಅಥವಾ ವೀಡಿಯೋ ಇರಬೇಕು.

Leave a Reply

Your email address will not be published. Required fields are marked *