ತಿ.ನರಸೀಪುರ: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ತಿ.ನರಸೀಪುರ ಪಟ್ಟಣದಲ್ಲಿ ಬಿಜೆಪಿಯ ವರುಣ ಮತ್ತು ತಿ.ನರಸೀಪುರ ಮಂಡಲ ಕಾರ್ಯಕರ್ತರು ಪ್ರತ್ಯೇಕವಾಗಿ ರಸ್ತೆ ಸಂಚಾರ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಿರುಮಕೂಡಲು ಸಮೀಪದ ಗರ್ಗೇಶ್ವರಿ ಬಿಂದಿಗೆ ಫ್ಯಾಕ್ಟರಿ ಬಳಿ ವರುಣ ಬಿಜೆಪಿ ಮಂಡಲ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಿದರು.
ಸರ್ಕಾರದ ವಿರುದ್ಧ ನಾಮಫಲಕ ಹಿಡಿದು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಹೆಚ್ಚಳವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಚುನಾವಣೆ ಮುಗಿಯುತ್ತಿದ್ದಂತೆಯೇ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಬೆಲೆ ಏರಿಕೆಯ ಗಾಯದ ಮೇಲೆ ಬರೆ ಎಳೆದಿದೆ. ತೈಲ ಬೆಲೆ ಏರಿಕೆಯಿಂದ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಲಿದೆ ಎಂದರು.
ವರುಣ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಚಿಕ್ಕರಂಗನಾಯಕ, ಮೈಸೂರು ಜಿಲ್ಲಾ ಕಾರ್ಯದರ್ಶಿ ಕೆ.ವಾಸುದೇವ್, ತೋಟದಪ್ಪ ಬಸವರಾಜು, ವರುಣ ಮಂಜು, ಕೆಂಪಯ್ಯನ ಹುಂಡಿ ಅಂದಾನಿ ಗೌಡ, ಕೆಂಪೇಗೌಡ, ಕುಮಾರ್, ಸತೀಶ್, ಮುದ್ದುಕೃಷ್ಣ, ಪ್ರಧಾನ ಕಾರ್ಯದರ್ಶಿ ವೆಂಕಟರಮಣ ಶೆಟ್ಟಿ, ಕುಮಾರ್, ಡೇರಿ ಅಧ್ಯಕ್ಷ ಡಿ.ಎಲ್. ಮಹದೇವಪ್ಪ, ಮಹದೇವಸ್ವಾಮಿ, ಹಿಟ್ಟವಳ್ಳಿ ಗೋಪಾಲ್, ಬಿ.ಎಲ್. ಮಹದೇವ, ಸಿ.ಪುಟ್ಟಯ್ಯ, ಪುಷ್ಪಲತಾ ಕನ್ನಡತಿ, ಲಕ್ಷ್ಮೀ ಇತರರು ಇದ್ದರು.
ತಿ.ನರಸೀಪುರ ಬಿಜೆಪಿ ಮಂಡಲದಿಂದ ಪ್ರತಿಭಟನೆ: ತಿ.ನರಸೀಪುರ ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಬಳಿ ತಿ.ನರಸೀಪುರ ಬಿಜೆಪಿ ಮಂಡಲದ ವತಿಯಿಂದ ಸಂಚಾರ ತಡೆ ನಡೆಸಲಾಯಿತು. ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಲಾಯಿತು.
ಮುಖಂಡ ಡಾ.ರೇವಣ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಬೆಲೆ ಏರಿಕೆ ಮೂಲಕ ಗೋಚರವಾಗುತ್ತಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸರ್ಕಾರ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.
ಕ್ಷೇತ್ರಾಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ, ಪುರಸಭಾ ಸದಸ್ಯ ಕಿರಣ್, ಮಾಜಿ ಸದಸ್ಯ ಎನ್.ಲೋಕೇಶ್, ದಯಾನಂದ್ ಪಟೇಲ್, ಗೂಳಿ ಮಹೇಶ್, ಎಂ.ದಾಸಯ್ಯ, ನಂಜುಂಡಸ್ವಾಮಿ, ಡಾ.ಮಲ್ಲಿಕಾರ್ಜುನ್ ಸ್ವಾಮಿ, ಚಂದ್ರಶೇಖರ್, ಚೌಹಳ್ಳಿ ಸಿದ್ದರಾಜು, ರಾಜಶೇಖರ್ ಇತರರು ಇದ್ದರು.