ಕೊಪ್ಪ: ಭಾರಿ ಮಳೆಯಿಂದ ನಾರ್ವೆ, ಹರಿಹರಪುರ, ಅಂಬಳಿಕೆ, ಆರ್ಡಿಕೊಪ್ಪ, ಕಾರಂಗಿ, ಹರಕನಮಕ್ಕಿ, ಬೊಮ್ಮಲಾಪುರದಲ್ಲಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು ಅಡಕೆ, ಕಾಫಿ, ಭತ್ತದ ಗದ್ದೆಗಳು ಜಲಾವೃತಗೊಂಡಿವೆ.

ಕೊಪ್ಪ-ಚಿಕ್ಕಮಗಳೂರು ರಸ್ತೆ ಆರ್ಡಿಕೊಪ್ಪದ ಬಳಿ ತುಂಗಾ ನದಿಯ ಪ್ರವಾಹ ರಸ್ತೆಗೆ ಬಂದಿದ್ದು ಸಂಪರ್ಕ ಕಡಿತಗೊಂಡಿತ್ತು. ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹರಿಹರಪುರದ ಅಭಿರಾಮನಗರದಲ್ಲಿ ಜಲದುರ್ಗಿ ದೇವಸ್ಥಾನ ಬಳಿ ನೀರು ಬಂದು, ಸುಮಾರು ಇಪ್ಪತ್ತು ಅಡಿಯಷ್ಟು ಮಣ್ಣು ಕುಸಿದಿದೆ.
ಕೊಪ್ಪದಿಂದ ಕುದುರೆಗುಂಡಿ ಮಾರ್ಗವಾಗಿ ಕಾನೂರು ಸಂಪರ್ಕಿಸುವ ರಸ್ತೆ ಕುದುರೆಗುಂಡಿ ಬಳಿ ಕಪಿಲಾ ನದಿಯಿಂದ ಪ್ರವಾಹ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹರಿಹರಪುರ ಸಮೀಪದ ಮಾತ್ವನಿಯಲ್ಲಿ ದೇವೇಂದ್ರ ಎಂಬುವರ ಮನೆ ಸಮೀಪ ಮಳೆ ನೀರು ನಿಂತಿದ್ದು, ರಸ್ತೆ, ಕೃಷಿ ಜಮೀನು ಜಲಾವೃತಗೊಂಡಿದೆ. ಬೊಮ್ಮಲಾಪುರ ಗ್ರಾಮದ ಹೊಕ್ಕಳಿಕೆ ಹಾಗೂ ಹೊಲಗೋಡು ಸಂಪರ್ಕಿಸು ವ ರಸ್ತೆ ಮಧ್ಯೆ ಭೂ ಕುಸಿತ ಉಂಟಾಗಿದೆ. ತಲಮಕ್ಕಿಯ ಹನುಮಯ್ಯ ಎಂಬುವವರ ಮನೆಯ ಗೋಡೆ ಕುಸಿದಿದೆ. ಹಿರೇಗದ್ದೆಯ ಬಿ.ಎಸ್.ಸತೀಶ್ ಅವರ ತೋಟದಲ್ಲಿ ಬೃಹತ್ ಮರ ಬಿದ್ದು 75ಕ್ಕೂ ಹೆಚ್ಚು ಅಡಕೆ ಮರಗಳಿಗೆ ಹಾನಿಯಾಗಿದೆ. ತುಪ್ಪೂರಿನ ಬಿ.ಎಸ್.ಚಂದ್ರ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಕೊಪ್ಪದಿಂದ ಸಿದ್ದರಮಠ ಸಂಪರ್ಕಿಸುವ ರಸ್ತೆ ಚೌಕಿ ಬಳಿ ಬ್ರಾಹ್ಮೀ ನದಿಯ ಪ್ರವಾಹದಿಂದ ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಸೇತುವೆಯಲ್ಲಿ ಸಿಕ್ಕಿಕೊಂಡ ಮರದ ದಿಮ್ಮಿಗಳನ್ನು ಹರಂದೂರು ಗ್ರಾಪಂನಿಂದ ತೆರವು ಮಾಡಿದ ನಂತರ ಸಂಚಾರ ಆರಂಭಗೊಂಡಿತು. ಕೊಗ್ರೆ ಬಳಿ ಧರೆ ಕುಸಿದಿದ್ದು ಜಯಪುರದಿಂದ ಕೊಗ್ರೆ ಮಾರ್ಗವಾಗಿ ಕಲ್ಲುಗುಡ್ಡೆ, ಹೊರನಾಡು ಸಂಪರ್ಕ ಕಡಿತಗೊಂಡಿದೆ.
ಹರಿಹರಪುರ ಸಮೀಪದ ಸೂರ್ಳಿಯಯಲ್ಲಿ ಮಂಜಪ್ಪ ಎಂಬುವರ ಮನೆ ಪಕ್ಕ ಧರೆ ಕುಸಿದಿದೆ. ಬಸರೀಕಟ್ಟೆ ಮುಖ್ಯರಸ್ತೆಯಿಂದ ಚನ್ನೆಕಲ್ಲು ಸಂರ್ಕಿಸುವ ಸೇತುವೆ ಕೊಚ್ಚಿಕೊಂಡು ಹೋಗಿದೆ. ಕೊಗ್ರೆ ಸಮೀಪ ಅಬ್ಬಿಕಲ್ಲು ಎಂಬಲ್ಲಿ ರಸ್ತೆ ಪಕ್ಕದಲ್ಲಿ ಭೂಕುಸಿತವಾಗಿದ್ದು, ರಸ್ತೆ ಕುಸಿಯುವ ಹಂತದಲ್ಲಿದೆ. ಜಯಪುರದ ಅಲಗೇಶ್ವರದಲ್ಲಿ ನಾರಾಯಣ ಆಚಾರ್ಯ ಎಂಬುವವರ ಮನೆ ಹಿಂದೆ ಧರೆ ಕುಸಿದು ಮಣ್ಣು ಮನೆ ಮೇಲೆ ಬಿದ್ದಿದೆ.
ಕೊಪ್ಪದ ಮುಖ್ಯರಸ್ತೆಯ ವಿಜಯಾ ಎಂಬುವರ ಮನೆ ಸಂಪೂರ್ಣ ಕುಸಿದಿದೆ. ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿಯಿಂದ ನಿರಾಶ್ರಿತರಿಗೆ ಪುರಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.