ಆಗುಂಬೆ ಘಾಟಿಯಲ್ಲಿ ಸಂಚಾರ ಆರಂಭ

ತೀರ್ಥಹಳ್ಳಿ: ಒಂದೂವರೆ ತಿಂಗಳಿಂದ ಸ್ಥಗಿತಗೊಂಡಿದ್ದ ಮಲೆನಾಡು-ಕರಾವಳಿ ಸಂಪರ್ಕ ಸೇತುವೆ ಆಗುಂಬೆ ಘಾಟಿ ರಸ್ತೆಯಲ್ಲಿ ಗುರುವಾರ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ.

ಬುಧವಾರ ಸಂಜೆಯಿಂದಲೆ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಗುರುವಾರ ಬೆಳಗ್ಗೆಯಿಂದ ಈ ಮಾರ್ಗದಲ್ಲಿ ಮಿನಿ ಬಸ್‌ಗಳು ಎಂದಿನಂತೆ ಸಂಚಾರ ಆರಂಭಿಸಿವೆ. ಗುರುವಾರ ರಸ್ತೆಗೆ ಗುರುತು ಮಾಡುವ ಕೆಲಸ ನಡೆದಿತ್ತು.

ಘಾಟಿ ರಸ್ತೆಯ 5 ಮತ್ತು 14ನೇ ತಿರುವಿನಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಹಾಕಲಾಗಿದ್ದು ಇದರ ಕ್ಯೂರಿಂಗ್‌ಗೆ ಕನಿಷ್ಠ ಮೂರು ವಾರಗಳ ಅಗತ್ಯ ಇರುವ ಕಾರಣ ಜೂನ್ ಒಂದರಿಂದ ಈ ಮಾರ್ಗವನ್ನು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಶಿವಮೊಗ್ಗ ಜಿಲ್ಲಾಡಳಿತ ತಿಳಿಸಿದೆ.

ಘಾಟಿಯ 7ನೇ ಹೇರ್‌ಪಿನ್ ತಿರುವಿನಲ್ಲಿ ಕಾಮಗಾರಿ ಅಪೂರ್ಣಗೊಂಡಿದೆ. ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಇಲ್ಲಿ ರಸ್ತೆ ವಿಸ್ತರಣೆ ಮಾಡಬೇಕು. ಆದರೆ ವನ್ಯಜೀವಿ ವಿಭಾಗ ತಕರಾರು ತೆಗೆದಿರುವ ಕಾರಣ ಈ ಕಾಮಗಾರಿಯನ್ನು ಕೈಬಿಡಲಾಗಿದೆ. ಈ ತಿರುವಿನಲ್ಲಿ ರಸ್ತೆಯನ್ನು ವಿಸ್ತರಣೆಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕೆ ಕೆಲವು ಮರಗಳನ್ನು ತೆಗೆಯಬೇಕಾಗಿದ್ದು ಇದಕ್ಕೆ ಅರಣ್ಯ ಇಲಾಖೆ ಸುತಾರಾಂ ಅನುಮತಿ ನೀಡುತ್ತಿಲ್ಲ.