More

    ರಸ್ತೆ ದುರಸ್ತಿಗೆ ಆಗ್ರಹಿಸಿ ಸಂಚಾರ ತಡೆ

    ಯಳಂದೂರು: ಸಂತೇಮರಹಳ್ಳಿ ಗ್ರಾಮದಿಂದ ಮೂಗೂರು ಗ್ರಾಮದವರೆಗೆ ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಮಾಜಿ ಸಂಸದ ಆರ್.ಧ್ರುವನಾರಾಯಣ ನೇತೃತ್ವದಲ್ಲಿ ಯಳಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಸಂತೇಮರಹಳ್ಳಿ ಸರ್ಕಲ್‌ನಲ್ಲಿ ರಸ್ತೆ ಸಂಚಾರ ತಡೆ ನಡೆಸಿದರು.

    ಸಂತೇಮರಹಳ್ಳಿ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು, ಸರ್ಕಲ್‌ನಲ್ಲಿ ರಸ್ತೆ ಸಂಚಾರ ತಡೆ ನಡೆಸಿದ್ದರಿಂದ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತವಾಯಿತು.

    ಮಾಜಿ ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅಧಿಕಾರಕ್ಕೆ ಬಂದು 1 ವರ್ಷ 9 ತಿಂಗಳು ಕಳೆದಿವೆ. ಸಚಿವರಾಗಿಯೂ ಕೆಲಸ ಮಾಡಿದ್ದರು. ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್‌ವರೆಗಿನ ರಸ್ತೆ ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

    ಈ ರಸ್ತೆ ಕೇವಲ 12 ಕಿ.ಮೀ. ಇದೆ. ಇದು ರಾಷ್ಟ್ರೀಯ ಹೆದ್ದಾರಿ 209 ಹಾಗೂ 766ರನ್ನು ಬೆಸೆಯುವ ರಸ್ತೆಯಾಗಿದೆ. ಈ ಹಿಂದೆ ನಾನು ಸಂಸದನಾಗಿದ್ದಾಗ ಇದನ್ನು ಹೆದ್ದಾರಿಗೆ ಸೇರಿಸಲು ಯತ್ನಿಸಿದ್ದೆ. ಆದರೆ ಕೇವಲ 12 ಕಿ.ಮೀ. ರಸ್ತೆ ಸೇರಿಸಲು ತಾಂತ್ರಿಕ ಸಮಸ್ಯೆಗಳು ಎದುರಾಯಿತು. ಇದು ಲೋಕೋಪಯೋಗಿ ಇಲಾಖೆಯ ರಸ್ತೆಯಾಗಿದ್ದು ರಾಜ್ಯ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಮಾಡಬಹುದು. ಆದರೆ ಈ ಕೆಲಸ ನಡೆದಿಲ್ಲ ಎಂದು ಹೇಳಿದರು.

    ರಸ್ತೆ ತುಂಬೆಲ್ಲಾ ಹಳ್ಳಕೊಳ್ಳಗಳು ಬಿದ್ದಿದ್ದು, ನಿತ್ಯ ನೂರಾರು ವಾಹನ ಸವಾರರು ಬವಣೆಪಡುವ ಸ್ಥಿತಿ ಇದೆ. ಕೆಲವರು ಅಪಘಾತದಲ್ಲಿ ಸಾವು-ನೋವು ಅನುಭವಿಸಿದ್ದಾರೆ. ಅನುದಾನ ಕೊಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 209ಕ್ಕೆ ನನ್ನ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರು 1400 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದರು. ಆಗ ಶೇ.35ರಷ್ಟು ಕಾಮಗಾರಿ ಮುಗಿದಿತ್ತು. ಆದರೆ ಈ ಕಾಮಗಾರಿಯೂ ಈಗ ವಿಳಂಬವಾಗಿದೆ. ಸಂಸದ ವಿ. ಶ್ರೀನಿವಾಸ ಪ್ರಸಾದ್ ಈ ಬಗ್ಗೆ ಕೇಂದ್ರದ ಗಮನ ಸೆಳೆದು ಈ ರಸ್ತೆ ಅಭಿವೃದ್ಧಿಗೂ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

    ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ರಸ್ತೆ ಅಭಿವೃದ್ಧಿ ಮಾಡಲು ಶಾಸಕ ಎನ್.ಮಹೇಶ್ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

    ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಈ ಹಿಂದೆ ಶಾಸಕ ಎನ್.ಮಹೇಶ್ ಅವರೇ ಅಭಿವೃದ್ಧಿ ಮಾಡುವಂತೆ ರಸ್ತೆಗೆ ಮಣ್ಣು ಸುರಿದು, ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಆದರೆ, ಅಧಿಕಾರಕ್ಕೆ ಬಂದು ಒಂದು ಮುಕ್ಕಾಲು ವರ್ಷವಾದರೂ ದುರಸ್ತಿ ಮಾಡಿಸಿಲ್ಲ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ಹಿಂದುಳಿದಿದ್ದಾರೆ ಎಂದು ದೂರಿದರು.
    ತಹಸೀಲ್ದಾರ್ ಮಹೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಜೆ.ಯೋಗೇಶ್, ಸದಾಶಿವಮೂರ್ತಿ, ತಾ.ಪಂ.ಅಧ್ಯಕ್ಷ ನಿರಂಜನ್, ಸದಸ್ಯ ವೈ.ಕೆ. ಮೋಳೆ ನಾಗರಾಜು, ಪ.ಪಂ. ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹದೇವನಾಯಕ, ಮಂಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು, ರವಿಕುಮಾರ್, ಕೃಷ್ಣಪುರ ದೇವರಾಜು ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts