ಅದಮಾರು ಮಠಕ್ಕೆ ಸಾಂಪ್ರದಾಯಿಕ ಟಚ್

ಗೋಪಾಲಕೃಷ್ಣ ಪಾದೂರು ಉಡುಪಿ
ಅದಮಾರು ಮಠ ಪರ್ಯಾಯಕ್ಕೆ ಇನ್ನು ನಾಲ್ಕು ತಿಂಗಳು ಬಾಕಿ ಉಳಿದಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮಠದ ಹಿಂಭಾಗದ ಸುತ್ತುಪೌಳಿಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಸುಣ್ಣ-ಮಣ್ಣು ಮಿಶ್ರಿತ ಗಾರೆಯಿಂದ ಪುನಶ್ಚೇತನಗೊಳಿಸಲಾಗುತ್ತಿದೆ.

ಶತಮಾನಗಳಷ್ಟು ಹಳೆಯದಾದ ಜೀರ್ಣಾವಸ್ಥೆಯಲ್ಲಿದ್ದ ಗೋಡೆಗಳನ್ನು ದುರಸ್ತಿ ಮಾಡಲಾಗುತ್ತಿದ್ದು, ಹಿಂದಿನ ಕಾಲದ ಮಾದರಿಯಲ್ಲಿಯೇ ನವೀಕರಣ ಕಾರ್ಯ ನಡೆಯುತ್ತಿದೆ. ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ ಹಿಂದಿನವರು ನಿರ್ಮಾಣ ಕಾರ್ಯಕ್ಕೆ ಉಪಯೋಗಿಸುತ್ತಿದ್ದಂತೆ ಸುಣ್ಣ, ಮಣ್ಣು, ಬೆಲ್ಲ ಮತ್ತು ಮರಳು ಮಿಶ್ರಣದಿಂದ ಗಾರೆ ಮಾಡಲಾಗುತ್ತಿದೆ.

ಸುತ್ತುಪೌಳಿಯ ಸುತ್ತಲೂ ಮಣ್ಣು ಮತ್ತು ಮುರಕಲ್ಲಿನ ಗೋಡೆಗಳಿದ್ದು, ಇವುಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಹಳೇ ಗಾರೆಯನ್ನು ತೆಗೆದು ಗೋಡೆ ಮೇಲೆ ಬೆಲ್ಲದ ನೀರನ್ನು ಸಾರಿಸಿ, ಕೆಂಪು ಮಣ್ಣು ಮಿಶ್ರಿತ ದ್ರವ್ಯಗಳಿಂದ ಪ್ಲಾಸ್ಟರಿಂಗ್ ಮಾಡಲಾಗುತ್ತದೆ. ನೆಲಕ್ಕೆ ಹಾಸುಕಲ್ಲುಗಳು, ಗ್ರಾೃನೈಟ್, ಟೈಲ್ಸ್ ಬಳಸದೆ ಕೇವಲ ಕಬ್ಬಿಣದ ಅದಿರಿನ ಪುಡಿಯಿಂದ ತಯಾರಿಸಿದ ಕಾವೆ ಹಾಕಲಾಗುತ್ತದೆ. ಹೀಗೆ ಎಲ್ಲವೂ ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿಕೊಂಡು ನವೀಕರಣ ಮಾಡುತ್ತಿರುವುದು ವಿಶೇಷ.

ಕುಶಲಕರ್ಮಿಗಳ ಕೊರತೆ: ಶತಮಾನಗಳ ಹಿಂದೆ ಬಳಕೆಯಲ್ಲಿದ್ದ ಕಟ್ಟಡ ನಿರ್ಮಾಣದ ತಂತ್ರಜ್ಞಾನ ತಿಳಿದವರು ಈಗ ಕರಾವಳಿಯಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ಲಭ್ಯ ಇದ್ದಾರೆ. ಹೀಗಾಗಿ ಸಂಪೂರ್ಣ ನೈಸರ್ಗಿಕ ವಿಧಾನದಲ್ಲಿ ನವೀಕರಣ ಸವಾಲಿನ ಸಂಗತಿ.

ಸುಣ್ಣ, ಬೆಲ್ಲ, ಮರಳು, ಮಣ್ಣನ್ನು ಸಮಪ್ರಮಾಣದಲ್ಲಿ ಬೆರೆಸಿ ವಾರಗಳ ಕಾಲ ಇವು ಚೆನ್ನಾಗಿ ಮಿಶ್ರಣವಾಗಲು ಬಿಡಬೇಕು. ಸಿಮೆಂಟ್ ಗಾರೆಗಿಂತ ಮಣ್ಣಿನ ಗಾರೆ ಮಾಡುವ ವಿಧಾನವೂ ವಿಭಿನ್ನವಾಗಿದೆ. ಗೋಡೆ ಮೆದುವಾಗಲು ಗಾರೆ ಬಳಿಕ ಮತ್ತೆ ಸಾರಿಸಿದ ಮಣ್ಣಿನಿಂದ ಲೇಪನ ನೀಡಬೇಕು. ಇದಕ್ಕಾಗಿ ಗುಣಮಟ್ಟದ ಮಣ್ಣನ್ನು ಪೆರಂಪಳ್ಳಿಯ ಮಠದ ಜಾಗದಿಂದ ತಂದು ಶೇಖರಿಸಿ ಇಡಲಾಗಿದೆ. ಇವೆಲ್ಲದಕ್ಕೂ ನೈಪುಣ್ಯದ ಅಗತ್ಯವಿದ್ದು, ಕಲಾವಿದ ಪುರುಷೋತ್ತಮ ಅಡ್ವೆ ಮಾರ್ಗದರ್ಶನದಲ್ಲಿ ಸುರೇಶ್, ಕೃಷ್ಣ ಸೇರಿದಂತೆ 7 ಕುಶಲಕರ್ಮಿಗಳು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಸಿಮೆಂಟ್ ಗೋಡೆಯಂತೆ ಇದಕ್ಕೆ ನೀರು ಸಿಂಪಡಿಸುವ ಅಗತ್ಯವಿಲ್ಲ. ಗಾರೆ 2 ದಿನಕ್ಕೆ ಗಟ್ಟಿಯಾಗುತ್ತದೆ. ದಿನ ಕಳೆದಂತೆ ಗಟ್ಟಿಯಾಗುತ್ತಾ ಹೋಗುವುದು ಇದರ ವಿಶೇಷತೆ.

 ಮಠದಲ್ಲಿ ಹಂತ ಹಂತದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗುವುದು. ಮೂಲ ವಿನ್ಯಾಸ ಮತ್ತು ಸಾಂಪ್ರದಾಯಿಕ ಶೈಲಿಗೆ ಯಾವುದೇ ಧಕ್ಕೆ ಬಾರದಂತೆ ಅಭಿವೃದ್ಧಿ ನಡೆಯಲಿದೆ. ಮೊದಲಿಗೆ ಗೋಡೆಯನ್ನು ದುರಸ್ತಿ ಮಾಡಲಾಗುತ್ತಿದೆ. ಇದಕ್ಕೆ ನೈಸರ್ಗಿಕ ಬೂದು ಬಣ್ಣ ಹೊರತು ಯಾವುದೇ ರಾಸಾಯನಿಕ ಬಣ್ಣ ಬಳಸುತ್ತಿಲ್ಲ. ಒಟ್ಟಿನಲ್ಲಿ ಪರಿಸರಕ್ಕೆ ಪೂರಕವಾದ ಪುನಶ್ಚೇತನ ಕಾರ್ಯಕ್ಕೆ ಆದ್ಯತೆ.
– ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಶ್ರೀಗಳು

Leave a Reply

Your email address will not be published. Required fields are marked *